ಕೀವ್: ಉಕ್ರೇನ್ ಹಾಗೂ ರಷ್ಯಾ ಯುದ್ದ ಸಂಘರ್ಷ ವಿಶ್ವದಲ್ಲಿಯೇ ಭಾರಿ ಆತಂಕವನ್ನುಂಟು ಮಾಡಿದೆ. ಈ ಆತಂಕದ ನಡುವೆಯೇ ಹೊಸ ಜೀವನದ ಕನಸುಗಳನ್ನು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಇದೀಗ ದೇಶ ಸೇವೆಗಾಗಿ ಗನ್ ಹಿಡಿದಿದೆ.
ಕೀವ್ ಸಿಟಿ ಕೌನ್ಸಿಲ್‍ನ ಡೆಪ್ಯೂಟಿ ಆಗಿರುವ 21 ವರ್ಷದ ಅರಿವಾ, ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಫರ್ಸಿನ್ ಅವರನ್ನು ವಿವಾಹವಾಗಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‍ನ ಕಲ್ಯಾಣ ಮಂಟಪವೊಂದರಲ್ಲಿ ಈ ಜೋಡಿ, ನಿನ್ನೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ಇಂದು ದೇಶ ಸೇವೆಗೆ ಗನ್ ಹಿಡಿದು ಹೋರಾಡುತ್ತಿದ್ದಾರೆ.
ಯಾರಿನಾ ಅರಿವಾ ಮತ್ತು ಆಕೆಯ ಸಂಗಾತಿ ಸ್ವ್ಯಾಟೋಸ್ಲಾವ್ ಫರ್ಸಿನ್ ಮೇ ತಿಂಗಳಲ್ಲಿ ಉಕ್ರೇನ್ ರಾಜಧಾನಿ ಕೀವ್‍ನಲ್ಲಿರುವ ರೆಸ್ಟೋರೆಂಟ್‍ವೊಂದರಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿರುವ ಪರಿಣಾಮ ಅವರು ತಮ್ಮ ಯೋಜನೆಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಯುದ್ಧದ ನಡುವೆಯೇ ಅವರು ಅವಸರದಲ್ಲಿ ಹಸೆಮಣೆ ಏರಿದ್ದಾರೆ. ಇದನ್ನೂ ಓದಿ: ಉಕ್ರೇನ್ ಯುದ್ಧ ಭೀಕರತೆ ನಡುವೆಯೂ ಹಸೆಮಣೆ ಏರಿ ಜೋಡಿ ಸಂಭ್ರಮ
ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್ ಯುದ್ಧದ ನೆಲೆಯಾಗಿ ಮಾರ್ಪಟ್ಟಿದೆ. ಎಲ್ಲೆಡೆ ಗುಂಡು, ಕ್ಷಿಪಣಿ, ಬಾಂಬ್‍ಗಳ ಸದ್ದು ಕೇಳುತ್ತಿದೆ. ಜನ ಪ್ರಾಣಭೀತಿಯಲ್ಲಿ ಸಮಯ ಕಳೆಯುತ್ತಿದ್ದಾರೆ. ಎಷ್ಟೋ ಮಂದಿ ವಿದೇಶಿಗರು ತಮ್ಮ ತವರುಗಳಿಗೆ ಕಾಲ್ಕಿತ್ತಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲೂ ಜೋಡಿಯೊಂದು ನಿರಾತಂಕವಾಗಿ ಮದುವೆ ಸಮಾರಂಭ ಏರ್ಪಡಿಸಿದ್ದು ಎಲ್ಲೆಡೆ ಚರ್ಚೆಯಾಗುತ್ತಿದೆ. ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕಣ್ಣಲ್ಲಿ ನೀರು ತರಿಸುತ್ತಿದೆ 80 ವರ್ಷದ ವ್ಯಕ್ತಿ ಉಕ್ರೇನ್ ಸೇನೆಗೆ ಸೇರಲು ನಿಂತಿರುವ ಫೋಟೋ!
ರಷ್ಯಾ ಪಡೆಗಳು ಈಗಾಗಲೇ ಉಕ್ರೇನ್ ದೇಶದಲ್ಲಿ ಕಾಣಿಸಿಕೊಂಡಿವೆ. ಉಕ್ರೇನ್‍ನಲ್ಲಿ ಈಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಭವಿಷ್ಯ ಹೇಗಿರುತ್ತದೋ ಗೊತ್ತಿಲ್ಲ. ನಾವಿಬ್ಬರು ಈಗಲೇ ಮದುವೆಯಾಗೋಣ ಎಂದು ಯಾರಿನಾ ಅರಿವಾ ಮತ್ತು ಸ್ವ್ಯಾಟೋಸ್ಲಾವ್ ಫರ್ಸಿನ್ ಜೋಡಿ ನಿರ್ಧರಿಸಿ ಕ್ರೈಸ್ತ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಉಕ್ರೇನ್ ನಗರಗಳಿಂದ ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ರಸ್ತೆಗಳು ಮತ್ತು ಸುರಂಗ ಮಾರ್ಗಗಳಲ್ಲಿ ಜನರು ಉಸಿರುಗಟ್ಟಿ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶಗಳು ಈ ಜೋಡಿ ತರಾತುರಿಯಲ್ಲಿ ಮದುವೆಯಾಗಲು ಕಾರಣವಾಯಿತು.
ಈ ಸಂದರ್ಭ ತುಂಬಾ ಭಯಾನಕವಾಗಿದೆ. ಆದರೂ ಪ್ರತಿಯೊಬ್ಬರ ಬದುಕಿನಲ್ಲೂ ಇದು ಸಂತೋಷದ ಕ್ಷಣ. ನಾವು ಹೊರಗೆ ಹೋದರೆ ಗುಂಡು ಸೈರನ್ ಶಬ್ದಗಳನ್ನು ಕೇಳುತ್ತೇವೆ. ನಮ್ಮ ಭೂಮಿಗಾಗಿ ಹೋರಾಡುವ ಕ್ಷಣವಿದು. ಈ ಸಂದರ್ಭದಲ್ಲಿ ನಾವು ಸಾಯಲೂಬಹುದು. ಅದೆಲ್ಲಕ್ಕಿಂತ ಮೊದಲು ನಾವು ಒಟ್ಟಿಗೆ ಇರಲು ಬಯಸಿದ್ದೇವೆ ಎಂದು ಅರಿವಾ ಪ್ರತಿಕ್ರಿಯಿಸಿದ್ದಾರೆ.