ಹೊಸ ಯುಗದ ಆರಂಭವನ್ನು ಯುಗಾದಿ (Ugadi 2025) ಎಂದು ಕರೆಯಲಾಗುತ್ತದೆ. ‘ಯುಗ’ (ವರ್ಷ) ಮತ್ತು ‘ಆದಿ’ (ಆರಂಭ) ಎಂಬರ್ಥ. ಇವು ಸಂಸ್ಕೃತ ಮೂಲದ ಪದಗಳಾಗಿವೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ಬರುವ ಈ ದಿನವು ಹಿಂದೂಗಳಲ್ಲಿ (Hindu) ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಇನ್ನೂ ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ಮಂಗಳಕರ ದಿನ ಯುಗಾದಿ ಎಂದು ಆಚರಣೆ ಮಾಡಲಾಗುತ್ತದೆ ಎಂಬ ಉಲ್ಲೇಖ ಪುರಾಣದಲ್ಲಿದೆ.
ಯುಗಾದಿ ದಿನ ಬೇವು-ಬೆಲ್ಲ (Bevu Bella) ಹಂಚುವು ಪದ್ಧತಿ ಇದೆ. ಇದು ಬದುಕಿನಲ್ಲಿ ಬರುವ ಬೇವು-ಬೆಲ್ಲದಂತೆ ಸಿಹಿ ಕಹಿ ಎರಡನ್ನೂ ಸಮನಾಗಿ ಹೊಂದಿರುತ್ತದೆ ಎಂಬುದನ್ನು ಸಂಕೇತಿಸುತ್ತದೆ. ಈ ದಿನ ಸ್ವಚ್ಛ ಮಾಡಿ, ತೋರಣಗಳಿಂದ ಅಲಂಕಾರ ಮಾಡಿ, ರಂಗೋಲಿ ಹಾಕಿ ಸಿಂಗರಿಸಲಾಗುತ್ತದೆ. ಜನರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸಾಂಪ್ರದಾಯಿಕವಾಗಿ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ದೇವಾಲಯಗಳು, ಮನೆಗಳು ಮತ್ತು ಅಂಗಡಿಗಳ ಪ್ರವೇಶದ್ವಾರಗಳಲ್ಲಿ ಮಾವಿನ ಎಲೆಗಳಿಂದ ತೋರಣ ಕಟ್ಟಲಾಗುತ್ತದೆ. ಅಲ್ಲದೇ, ವಿಶೇಷ ಅಡುಗೆಗಳನ್ನು ಮಾಡಿ ಮನೆಮಂದಿಯಲ್ಲ ಸಂಭ್ರಮದಿಂದ ಊಟ ಮಾಡುತ್ತಾರೆ.
ಯುಗಾದಿ ಹಬ್ಬ (Ugadi Festival) ಶತ ಶತಮಾನಗಳಿಂದಲೂ ಆಚರಿಸಿಕೊಂಡು ಬಂದ ಹಬ್ಬವಾಗಿದೆ. ಅದರ ಮೂಲವು ಶಾತವಾಹನ ರಾಜವಂಶಕ್ಕೂ ಹಿಂದಿನದು ಎನ್ನುವ ನಂಬಿಕೆಯಿದೆ. ಈ ರಾಜ ವಂಶವು ಇಂದಿನ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಭಾಗಗಳನ್ನು ಕ್ರಿ.ಪೂ ಸುಮಾರು 230 ರಿಂದ ಕ್ರಿ.ಶ 220 ರವರೆಗೆ ಆಳಿದ ಸಾಮ್ರಾಜ್ಯವಾಗಿದೆ. ಈ ಕಾಲದ ಪ್ರಾಚೀನ ಗ್ರಂಥಗಳು ಮತ್ತು ಶಾಸನಗಳಲ್ಲಿ ಯುಗಾದಿ ಹಬ್ಬದ ಉಲ್ಲೇಖವನ್ನು ಕಾಣಬಹುದಾಗಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯನ್ನು ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಹೊಸ ಯುಗದ ಆರಂಭವನ್ನು ಸಂಕೇತಿಸುತ್ತದೆ. ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು (Brahma) ಈ ಮಂಗಳಕರ ದಿನದಂದು ಸೃಷ್ಟಿ ಪ್ರಕ್ರಿಯೆಯನ್ನು ಪ್ರಾರಂಭಿಸಿದನು ಎಂಬುದು ಈ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ನಂಬಿಕೆಯಾಗಿದೆ. ಹಿಂದೂ ಪುರಾಣದ ಪ್ರಕಾರ, ಬ್ರಹ್ಮ ದೇವ ಈ ದಿನ ವಿಶ್ವವನ್ನು ಸೃಷ್ಟಿಸಿದ. ನಂತರ ಅವನು ದಿನಗಳು, ವಾರಗಳು, ತಿಂಗಳುಗಳು ಮತ್ತು ವರ್ಷಗಳನ್ನು ಸೃಷ್ಟಿಸಿದ. ಆದ್ದರಿಂದ, ಯುಗಾದಿಯನ್ನು ವಿಶ್ವ ಸೃಷ್ಟಿಯ ಮೊದಲ ದಿನ ಎಂದು ನಂಬಲಾಗಿದೆ.