ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examination Authority) ಯುಜಿ ನೀಟ್-24 ಮತ್ತು ಯುಜಿ ಸಿಇಟಿ-24 ಅಭ್ಯರ್ಥಿಗಳಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ಉದ್ದೇಶಿತ ಪ್ರಕಟಣೆಗೂ ಎರಡು ದಿನ ಮೊದಲೇ ಫಲಿತಾಂಶ ಪ್ರಕಟಿಸಿದೆ. ಇದರೊಂದಿಗೆ, ಅಭ್ಯರ್ಥಿಗಳಿಗೆ ʻಚಾಯ್ಸ್ʼ ಆಯ್ಕೆ ಪ್ರಕ್ರಿಯೆ ಆಗಸ್ಟ್ 31 ರಿಂದ (ಶನಿವಾರ) ಆರಂಭವಾಗಲಿದೆ.
ವೈದ್ಯಕೀಯ, ದಂತವೈದ್ಯಕೀಯ, ಆಯುಷ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ, ಬಿಎಸ್ಸಿ (ನರ್ಸಿಂಗ್), ಯೋಗ ಮತ್ತು ನ್ಯಾಚುರೋಪತಿ ಮುಂತಾದ ಕೋರ್ಸ್‌ಗಳ ಅಭ್ಯರ್ಥಿಗಳಿಗೆ (UG-NEET Candidate) ಇದು ಅನ್ವಯವಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
Advertisement
ಪೋಷಕರ ಜೊತೆ ಚರ್ಚಿಸಿ ಸೂಕ್ತ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಆಗಸ್ಟ್ 31ರ ಬೆಳಿಗ್ಗೆ 11 ರಿಂದ ಸೆಪ್ಟೆಂಬರ್ 3ರ ವರೆಗೆ (ರಾತ್ರಿ 11.59) ಅವಕಾಶವಿರುತ್ತದೆ. ಅಭ್ಯರ್ಥಿಗಳು ನಾಲ್ಕು ಚಾಯ್ಸ್‌ಗಳಲ್ಲಿ ತಮಗೆ ಸರಿ ಎನಿಸುವ ಯಾವುದಾದರೂ ಒಂದು ಚಾಯ್ಸ್ ಆಯ್ಕೆ ಮಾಡುವ ಮೊದಲು, ಅದಕ್ಕೆ ಸಂಬಂಧಿಸಿದ ವಿವರಣೆ ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
Advertisement
ಚಾಯ್ಸ್ 1 ಮತ್ತು ಚಾಯ್ಸ್ 2 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಆಗಸ್ಟ್ 31ರ ಮಧ್ಯಾಹ್ನ 1ರಿಂದ ಸೆಪ್ಟೆಂಬರ್ 4ರ ಸಂಜೆ 4ರ ಒಳಗೆ ಶುಲ್ಕ ಪಾವತಿಸಬೇಕು.
Advertisement
ಚಾಯ್ಸ್-1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿದ ನೀಟ್ ಅಭ್ಯರ್ಥಿಗಳು ಮೂಲ ದಾಖಲೆಗಳು ಮತ್ತು ಎರಡು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಕೆಇಎ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಸಲ್ಲಿಸಲು ಸೆಪ್ಟೆಂಬರ್ 2ರ ಬೆಳಿಗ್ಗೆ 10:30 ರಿಂದ ಸೆಪ್ಟೆಂಬರ್ 4ರ ಸಂಜೆ 4ರ ವರೆಗೆ ಅವಕಾಶವಿರುತ್ತದೆ. (ಯಾವ ವರ್ಗದ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಸೂಚನೆ ಓದಿ ತಿಳಿದುಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ).
ಚಾಯ್ಸ್ 1 ಆಯ್ಕೆ ಮಾಡಿ ಶುಲ್ಕ ಪಾವತಿಸಿ ಮೂಲ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಸೆಪ್ಟೆಂಬರ್ 2 ರಿಂದ ಸೆಪ್ಟಂಬರ್ 5ರ ಒಳಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು. ಸೀಟು ಹಂಚಿಕೆಯಾದ ಕಾಲೇಜುಗಳಲ್ಲಿ ಸೆ.5ರ ಸಂಜೆ 5:30ಕ್ಕೆ ಮುಂಚೆ ಪ್ರವೇಶ ಪಡೆಯಬೇಕು. ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಮುಗಿಸುವ ಸಲುವಾಗಿ ಎಲ್ಲಾ ಶನಿವಾರ, ಭಾನುವಾರ ಹಾಗೂ ಗೆಜೆಟ್ ಪ್ರಕಟಿತ ರಜಾದಿನಗಳನ್ನು ಕೆಲಸದ ದಿನಗಳೆಂದು ಪರಿಗಣಿಸಲಾಗುವುದು ಎಂದು ಹೆಚ್. ಪ್ರಸನ್ನ ಹೇಳಿದ್ದಾರೆ.
ಎಂಜಿನಿಯರಿಂಗ್ ಪ್ರವೇಶ ಪಡೆಯುವ ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಸಂಬಂಧಪಟ್ಟ ಕಾಲೇಜುಗಳಿಗೆ ಹೋಗಿ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್‌ಸೈಟ್ ಗಮನಿಸುವಂತೆ ತಿಳಿಸಿದ್ದಾರೆ.