– ಡಿಕೆಶಿ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ?
ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ವೀರ ಸಾವರ್ಕರ್ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಒಬ್ಬ ಚೀಪ್ ಪಾಲಿಟೀಷಿಯನ್ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಕರಂದ್ಲಾಜೆ ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯಗೆ ವೋಟ್, ಜಾತಿ ಧರ್ಮ ಮಾತ್ರ ಕಾಣುತ್ತೆ. ಆದರೆ ನಮಗೆ ಸಾವರ್ಕರ್ ಅವರ ತ್ಯಾಗ ಮುಖ್ಯ. ಅವರಿಗೆ ಭಾರತ ರತ್ನ ಗೌರವ ಸಿಗಬೇಕು. ಇದು ಸಿದ್ದರಾಮಯ್ಯನವರಂತಹ ಕ್ಷುಲ್ಲಕ ರಾಜಕಾರಣಿಗೆ ಅರ್ಥ ಆಗುವುದಿಲ್ಲ. ಸಿದ್ದರಾಮಯ್ಯ ಒಬ್ಬ ಚೀಪ್ ರಾಜಕಾರಣಿ. ಅವರಿಗೆ ಇದೆಲ್ಲಾ ಅರ್ಥ ಆಗುವುದಿಲ್ಲ ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ಬಿಡುಗಡೆಗೆ ವಿಜಯೋತ್ಸವ ಯಾಕೆ? ಡಿಕೆಶಿ ಸ್ವಾತಂತ್ರ್ಯ ಹೋರಾಟ ನಡೆಸಿ ಜೈಲಿನಿಂದ ಬಿಡುಗಡೆಯಾದ್ರಾ ಎಂದು ಶೋಭಾ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ. ಡಿಕೆಶಿ ಅವರ ಇನ್ನೂ ಅನೇಕ ಕೇಸುಗಳು ತನಿಖಾ ಹಂತದಲ್ಲಿದೆ. ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಡಿಕೆಶಿ ಅವರ ಕೇಸುಗಳ ವಿಚಾರಣೆ ಮೊದಲು ಮುಗಿಯಲಿ ಡಿಕೆಶಿ ಚುನಾವಣಾ ರಾಜಕೀಯಕ್ಕೆ ನಂತರ ಬರಲಿ ಎಂದರು.
ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಬಹುಮತ ಸಾಭೀತಾಗಿದೆ. ಹರ್ಯಾಣ ದಲ್ಲಿ ಕೂಡಾ ಭಾರತೀಯ ಜನತಾ ಪಕ್ಷ ಸರಕಾರ ರಚನೆ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.