– ಪೂರ್ವಾಶ್ರಮದ ಸಹೋದರರ ಆಕ್ರೋಶ
ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠಕ್ಕೆ ಒಳಪಟ್ಟ ಜಮೀನಿಗೆ ಸೋದೆ ಮಠದವರು ಜೆಸಿಬಿ ನುಗ್ಗಿಸಿದ್ದಾರೆ. ಏಕಾಏಕಿ ಜೆಸಿಬಿ ನುಗ್ಗಿಸಿ ಮರಗಳನ್ನು ಉರುಳಿಸಿರುವ ವಿರುದ್ಧ ಶೀರೂರು ಸ್ವಾಮೀಜಿಯ ಪೂರ್ವಾಶ್ರಮದ ಸಹೋದರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ಎಕರೆ ಜಮೀನಿನಲ್ಲಿ ಸೋದೆ ಮಠ ಲೇಔಟ್ ಮಾಡಲು ಮುಂದಾಗಿದೆ ಎಂಬೂದು ಅವರು ಆರೋಪ. ಶೀರೂರು ಸ್ವಾಮೀಜಿ ಮೃತರಾಗಿ ಎರಡು ವರ್ಷ ಕಳೆದಿದೆ. ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕವಾಗದೇ ಸೋದೆ ಮಠ ಶಿರೂರು ಮಠದ ಆಸ್ತಿಯಲ್ಲಿ ಕೈಯಾಡಿಸಬಾರದು. ಶಿರೂರು ಮಠದ ಜಮೀನಿನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಅಥವಾ ಸ್ವಚ್ಛತಾ ಕಾರ್ಯ ನಡೆಸಬಾರದು ಎಂದು ಪೂರ್ವಾಶ್ರಮದವರು ತಾಕೀತು ಮಾಡಿದ್ದಾರೆ.
ಇಷ್ಟಾಗುತ್ತಲೇ ಮಾಧ್ಯಮಗಳ ಕ್ಯಾಮೆರಾಗಳು ಸ್ಥಳಕ್ಕಾಗಮಿಸಿದ್ದನ್ನು ಕಂಡು ಜೆಸಿಬಿ ತನ್ನ ಕೆಲಸ ನಿಲ್ಲಿಸಿದೆ. ಗಿಡಗಂಟಿಗಳ ಸ್ಚಚ್ಛತಾ ಕಾರ್ಯ ಮಾಡಲು ಜೆಸಿಬಿ ಕರೆಸಿರುವುದಾಗಿ ಸೋದೆ ಮಠ ಸ್ಪಷ್ಟಪಡಿಸಿದೆ. ಶಿರೂರು ಮಠದ ಲಕ್ಷ್ಮೀವರತೀರ್ಥರು ಸಂಶಯಾಸ್ಪದ ಸಾವನ್ನಪ್ಪಿ ಒಂದು ಮುಕ್ಕಾಲು ವರ್ಷ ಕಳೆಯಿತು. ಇನ್ನು ಕೂಡ ಶೀರೂರು ಮಠದ ಉತ್ತರಾಧಿಕಾರಿ ಆಯ್ಕೆ ನಡೆದಿಲ್ಲ. ದ್ವಂದ್ವ ಸೋದೆ ಮಠದವರೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರರಿಗೆ ದೂರು ನೀಡಿದ್ದು, ಮಠದ ವಿಚಾರ ಆಗಿರುವುದರಿಂದ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಎರಡು ಮಠದವರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಲಾತವ್ಯ ಆಚಾರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದರು.