ಉಡುಪಿ: ಕಾಡಲ್ಲಿರುವ ಗಂಧದ ಮರ ದೋಚಿ ಖಾಲಿ ಮಾಡಿರುವ ಕಳ್ಳರು ಈಗ ನಾಡಿಗೂ ಲಗ್ಗೆಯಿಟ್ಟಿದ್ದಾರೆ. ಮನೆಯಂಗಳದಲ್ಲಿ ನೆಟ್ಟ ಗಂಧದ ಗಿಡಕ್ಕೂ ಕತ್ತರಿ ಹಾಕಿದ್ದಾರೆ.
ಉಡುಪಿಯ ನಗರದ ಅಂಬಲಪಾಡಿ ಮಹಾಕಾಳಿ ದೇವಸ್ಥಾನ ಪರಿಸರದ ಮನೆ ಆವರಣದಲ್ಲಿ ಬೆಳೆದಿದ್ದ ಗಂಧದ ಮರವನ್ನು ಮೂವರು ಚೋರರು ರಾತ್ರೋ ರಾತ್ರಿ ಕಡಿದು ಕೊಂಡೊಯ್ದಿದ್ದಾರೆ. ಮರ ಕಳ್ಳತನವಾದ ದಿನ ಹಗಲಲ್ಲಿ ಅಂಗವಿಕಲನ ವೇಷದಲ್ಲಿ ಬಂದಿದ್ದ ವ್ಯಕ್ತಿ ಮರವನ್ನು ನೋಡಿಕೊಂಡು ಹೋಗಿದ್ದಾನೆ. ನಂತರ ಕತ್ತಲಾಗುತ್ತಿದ್ದಂತೆ ಅವನು ಮತ್ತವನ ಗ್ಯಾಂಗ್ ಬಂದು ಮರ ಕಿತ್ತೊಯ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
Advertisement
Advertisement
ಹಗಲಿನಲ್ಲಿ ಭಿಕ್ಷೆ ಕೇಳುವ ನೆಪ ಮಾಡಿಕೊಂಡು ಮನೆಗೆ ಬಂದಾತ ಅದೇ ದಿನ ರಾತ್ರಿ ಒಂದು ಗಂಟೆ ಸುಮಾರಿಗೆ ಇತರ ಇಬ್ಬರೊಂದಿಗೆ ಬಂದು ಮರಕಳ್ಳತನ ಮಾಡಿದ್ದಾನೆ. ಸದ್ದಿಲ್ಲದೆ ಗಂಧದ ಮರ ಉರುಳಿಸಿ, ಯಾರಿಗೂ ಸಂಶಯ ಬಾರದಂತೆ ಕ್ಷಣ ಮಾತ್ರದಲ್ಲಿ ಅದನ್ನು ತೆಗೆದುಕೊಂಡು ಹೋಗಿದ್ದಾರೆ.
Advertisement
ಸುಮಾರು ಒಂದೂವರೆ ಲಕ್ಷರೂಪಾಯಿಯಷ್ಟು ಮೌಲ್ಯದ ಈ ಗಂಧದ ಗಿಡವನ್ನು ಮನೆತೋಟದಲ್ಲೇ ಬೆಳೆಸಲಾಗಿತ್ತು. ಮನೆಯಲ್ಲಿ ಜನರು ವಾಸವಿದ್ದರೂ ರಾಜಾರೋಷವಾಗಿ ಬಂದು ಚೋರರ ತಂಡ ಕೆಲಸ ಮುಗಿಸಿ ಹೋಗಿದ್ದಾರೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಠಾಣೆಗೆ ದೂರು ಕೊಡಲು ಮನೆಯವರು ನಿರ್ಧರಿಸಿದ್ದಾರೆ.