ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ನರ್ಸ್ ಸೌದಿ ಅರೇಬಿಯಾದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.
ಶಿರ್ವ ಗ್ರಾಮದ ಕುತ್ಯಾರು ನಿವಾಸಿ ಜೋತ್ಸ್ನಾ ನಿಗೂಢವಾಗಿ ಮೃತಪಟ್ಟಿರುವ ನರ್ಸ್. ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯ ಆಸ್ಪತ್ರೆಯಲ್ಲಿ ಜ್ಯೋತ್ಸ್ನಾ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಆರು ವರ್ಷಗಳಿಂದ ನರ್ಸ್ ಆಗಿದ್ದ ಅವರು ಜುಲೈ 19 ರಂದು ಪತಿ ಅಶ್ವಿನ್ ಮಥಾಯಾಸ್ ರೊಂದಿಗೆ ಮಾತನಾಡಿದ್ದರು. ಎರಡು ದಿನಗಳ ಬಳಿಕ ಸಹೋದ್ಯೋಗಿ ಮೂಲಕ ಪತ್ನಿ ಜ್ಯೋತ್ಸ್ನಾ ಸಾವನ್ನಪ್ಪಿರುವ ಮಾಹಿತಿ ಬಂದಿದೆ.
Advertisement
ಜೋತ್ಸ್ನಾ ಸಾವಿನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸೌದಿ ಅರೇಬಿಯಾದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆಯೂ ಈವರೆಗೆ ಕುಟುಂಬಕ್ಕೆ ಯಾವುದೇ ನಿಖರ ಮಾಹಿತಿ ಕೂಡ ಲಭ್ಯವಾಗಿಲ್ಲ. ಮೃತ ಜೋತ್ಸ್ನಾ ಕುಟುಂಬದವರಿಂದ ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ಅವರನ್ನು ಸಂಪರ್ಕಿಸುವ ಪ್ರಯತ್ನ ಕೂಡ ಆಗಿದೆ. ಆದರೆ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ. ಶಾಸಕರಾದ ಐವನ್ ಡಿಸೋಜಾ ಮತ್ತು ರಘುಪತಿ ಭಟ್ ಸೌದಿ ಅರೇಬಿಯಾದ ಭಾರತೀಯ ರಾಯಭಾರಿಯರನ್ನು ಸಂಪರ್ಕಿಸಿದ್ದು, ಮಾಹಿತಿ ಪಡೆಯುವ ಪ್ರಯತ್ನ ನಡೆದಿದೆ.
Advertisement
ಸದ್ಯಕ್ಕೆ ಸೌದಿ ಅರೇಬಿಯಾದಿಂದ ಜ್ಯೋತ್ಸ್ನಾ ಮೃತದೇಹ ತರಿಸಲು ವಿಳಂಬವಾಗುತ್ತಿದೆ. ಆಕೆಯ ಸಾವಿಗೆ ಕಾರಣ ಇನ್ನೂ ತಿಳಿದಿಲ್ಲ ಅಂತ ಪತಿ ಅಶ್ವಿನ್ ಮಥಾಯಾಸ್ ಹೇಳಿದ್ದಾರೆ. ಅಶ್ವಿನ್ ಜ್ಯೋತ್ಸ್ನಾಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ಪತಿ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.
Advertisement