ಉಡುಪಿ: ಉಡುಪಿ ಶೀರೂರು ಸ್ವಾಮೀಜಿ ಕಡ್ಡಾಯವಾಗಿ ಶಿಷ್ಯ ಸ್ವೀಕಾರ ಮಾಡಬೇಕು ಎಂಬ ವಿಚಾರದಲ್ಲಿ ಇತರ ಅಷ್ಟಮಠಾಧೀಶರು ಕೆಲವೊಂದು ನಿರ್ಣಯ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿರೂರು ಮಠಾಧೀಶರ ಬಗ್ಗೆ ಕೆಲ ತಿಂಗಳ ಹಿಂದೆ ಆರಂಭವಾಗಿದ್ದ ಚರ್ಚೆ ಈಗ ಮತ್ತೊಮ್ಮೆ ಜೀವ ಪಡೆದುಕೊಂಡಿದೆ. ಭಾನುವಾರ ಸೇರಿದ ಐದು ಮಠಾಧೀಶರು ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಪರ್ಯಾಯ ಪಲಿಮಾರು ಮಠಾಧೀಶರು ತಿಳಿಸಿದ್ದಾರೆ.
Advertisement
ಅಷ್ಟಮಠಾಧೀಶರು ಪಾಲಿಸಬೇಕಾದ ನಿಯಮಗಳನ್ನು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪಾಲಿಸುತ್ತಿಲ್ಲ ಎಂಬ ಬಗ್ಗೆ ಕೆಲ ತಿಂಗಳ ಹಿಂದೆ ಆರೋಪ ಕೇಳಿಬಂದಿತ್ತು. ಇದೇ ಸಂದರ್ಭದಲ್ಲಿ ಶೀರೂರು ಸ್ವಾಮೀಜಿಯವರಿಗೆ ಅನಾರೋಗ್ಯವಾಗಿದೆ. ಈ ಸಂದರ್ಭ ದಿನನಿತ್ಯ ಪೂಜೆ ಮಾಡುವ ಪಟ್ಟದ ದೇವರನ್ನು ಕೃಷ್ಣಮಠದಲ್ಲಿ ಇರಿಸಿದ್ದರು. ಅಂದಿನಿಂದ ಪರ್ಯಾಯ ಪೀಠದಲ್ಲಿರುವ ಪಲಿಮಾರು ಸ್ವಾಮೀಜಿ ಪಟ್ಟದ ದೇವರಿಗೆ ಪೂಜೆ ನಡೆಸುತ್ತಿದ್ದಾರೆ.
Advertisement
ಈಗ ಶೀರೂರು ಸ್ವಾಮೀಜಿ ಗುಣಮುಖರಾಗಿದ್ದು, ಪಟ್ಟದ ದೇವರನ್ನು ವಾಪಸ್ ಕೇಳುತ್ತಿದ್ದಾರೆ. ಆದರೆ ಉಳಿದ ಏಳು ಮಠಾಧೀಶರು ಶೀರೂರು ಶ್ರೀಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ತನಕ ಪಟ್ಟದ ದೇವರನ್ನು ಶೀರೂರು ಸ್ವಾಮೀಜಿಗೆ ಕೊಡಬಾರದು ಎಂದು ನಿರ್ಧರಿಸಿದ್ದಾರೆ.
Advertisement
ಪೇಜಾವರ ಸ್ವಾಮೀಜಿ ನೇತೃತ್ವದಲ್ಲಿ ಇನ್ನೊಮ್ಮೆ ಸಭೆ ಸೇರಿ ಶಿಷ್ಯ ಸ್ವೀಕಾರದ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳುತ್ತೇವೆ. ಅಷ್ಟಮಠಾಧೀಶರಲ್ಲಿ ಬಹುಮತದ ತೀರ್ಮಾನವೇ ಅಂತಿಮ ಎಂದು ಪರ್ಯಾಯ ಪಲಿಮಾರು ಸ್ವಾಮೀಜಿ ತಿಳಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶೀರೂರು ಸ್ವಾಮೀಜಿಯ ಶಿಷ್ಯ ಸ್ವೀಕಾರದ ಕುರಿತು ಚರ್ಚೆ ಆರಂಭವಾಗಿತ್ತು. ಇದೀಗ ಮತ್ತೆ ಚರ್ಚೆ ಆರಂಭವಾಗಿದೆ. ಶೀರೂರು ಸ್ವಾಮೀಜಿ ಕಡ್ಡಾಯವಾಗಿ ಶಿಷ್ಯ ಸ್ವೀಕಾರ ಮಾಡಬೇಕೆಂಬ ವಿಚಾರಕ್ಕೆ ಮತ್ತೆ ಜೀವ ಬಂದಿದೆ.
Advertisement
ಯಾರು ಪರ್ಯಾಯ ಸ್ವೀಕರಿಸುತ್ತಾರೋ ಆ ಶ್ರೀಗಳೇ ಎರಡು ವರ್ಷಗಳ ಪಟ್ಟದ ದೇವರಿಗೆ ಪೂಜೆ ಮಾಡಬೇಕೆಂಬ ನಿಯಮವಿದೆ. ಒಂದು ವೇಳೆ ಈ ಅವಧಿಯಲ್ಲಿ ಶ್ರೀಗಳು ಅನಾರೋಗ್ಯಕ್ಕೆ ಒಳಗಾದರೆ ಅವರ ಶಿಷ್ಯ ಪೂಜೆ ಮಾಡಬೇಕಾಗುತ್ತದೆ.