ಉಡುಪಿ: ಕೊರೊನಾ ವಿರುದ್ಧ ಹೋರಾಟಕ್ಕೆ ರಾಜ್ಯದ ಶಾಸಕರಿಗೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್. ಆರ್ ರಂಗನಾಥ್ ಚಾಲೆಂಜ್ ಕೊಟ್ಟಿದ್ದರು. ರಂಗನಾಥ್ ಅವರ ಸಲಹೆ ಪಡೆದು ಕೊರೊನಾ ಚಾಲೆಂಜ್ ಸ್ವೀಕರಿಸುವುದಾಗಿ ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.
ಮೊದಲ ದಿನ ಒಂದು ಸಾವಿರ ನಿರ್ಗತಿಕರಿಗೆ, ಕಾರ್ಮಿಕರಿಗೆ ಊಟ ವಿತರಣೆ ಮಾಡಿದ ಅವರು, ತನ್ನ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಸಹಾಯಕ್ಕೆ ಬೂತ್ ಪ್ರಮುಖರ ನೇಮಕ ಮಾಡಿದ್ದಾರೆ. ತುರ್ತು ಸೇವೆ ಒದಗಿಸಲು ಮಂಡಲ ಮತ್ತು ಗ್ರಾಮ ಪ್ರಮುಖ್ ನೇಮಕ ಮಾಡಲು ನಿರ್ಧರಿಸಿದ್ದಾರೆ. ಮಣಿಪಾಲ ಕೆಎಂಸಿ ಮುಖ್ಯಸ್ಥ ರಂಜನ್ ಪೈ ಜೊತೆ ಬೆಂಗಳೂರಿನಲ್ಲಿ ಚರ್ಚೆ ನಡೆಸಿರುವ ಶಾಸಕ ರಘುಪತಿ ಭಟ್, ಟಿಎಂಎ ಪೈ ಆಸ್ಪತ್ರೆ ಕೊರೊನಾ ರೋಗಿಗಳಿಗೆ ಬಿಟ್ಟು ಕೊಡಲು ಒತ್ತಾಯ ಮಾಡಿದ್ದಾರೆ.
ಉಡುಪಿಯ ಟಿಎಂಎ ಪೈ ಆಸ್ಪತ್ರೆಯನ್ನು ಬಿಟ್ಟುಕೊಡಲು ರಂಜನ್ ಪೈ ಒಪ್ಪಿದ್ದು ಎಲ್ಲಾ ರೋಗಿಗಳನ್ನು ಕೆಎಂಸಿ ಮಣಿಪಾಲಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಮನೆಯಲ್ಲಿರುವ ಹಿರಿಯ ನಾಗರಿಕರಿಗೆ ಔಷಧಿ ಮತ್ತು ಅಗತ್ಯ ವಸ್ತು ಪೂರೈಕೆಗೆ ತಂಡ ರಚನೆ ಮಾಡುತ್ತೇವೆ. ಇದಕ್ಕೆ ಸರ್ಕಾರದ ಮತ್ತು ಜಿಲ್ಲಾಡಳಿತದ ಅನುಮತಿಯನ್ನು ಪಡೆಯಬೇಕಾಗಿದೆ ಎಂದರು.
ನೂರಾರು ಕಾರ್ಯಕರ್ತರು ಸ್ವಯಂ ಸೇವಕರಾಗಿ ದುಡಿಯಲು ಬರುವುದಾಗಿ ಹೇಳಿದ್ದು, ಜಿಲ್ಲಾಡಳಿತ ಒಪ್ಪಿಗೆ ಕೊಟ್ಟಿಲ್ಲ. ಅವರೆಲ್ಲ ಮನೆಯೊಳಗೆ ಇರುವುದೇ ಹೆಚ್ಚು ಸೂಕ್ತ ಎಂದಿದ್ದಾರೆ. ಅಗತ್ಯ ಸಂದರ್ಭದಲ್ಲಿ ಅವರನ್ನು ಬಳಸೋಣ ಎಂದು ಉಡುಪಿ ಜಿಲ್ಲಾಧಿಕಾರಿ ಜಿಮ ಜಗದೀಶ್, ಶಾಸಕ ಭಟ್ ಅವರಿಗೆ ಸಲಹೆ ನೀಡಿದ್ದಾರೆ.
ಮಕ್ಕಳು ವಿದೇಶದಲ್ಲಿರುವ ಹಿರಿಯ ನಾಗರೀಕರಿಗೆ ಯಾವುದೇ ಸೇವಾ ಶುಲ್ಕ ತೆಗೆದುಕೊಳ್ಳದೆ ಔಷಧ, ದಿನಸಿ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸುತ್ತೇವೆ. ಆದರೆ ಸರ್ಕಾರ ಮತ್ತು ಡಿಸಿ ಇದಕ್ಕೆ ಅನುಮತಿ ಕೊಡಬೇಕು ಎಂದರು.