ಉಡುಪಿ: ಸದ್ದಿಲ್ಲದೆ ಎದ್ದು ಬಂದ ಕ್ಯಾರ್ ಚಂಡಮಾರುತ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಎರಡು ಬಲಿ ಪಡೆದಿದೆ. ಭೀಕರ ಚಂಡ ಮಾರುತ ಕರ್ನಾಟಕ ಕರಾವಳಿ ತತ್ತರಿಸುವಂತೆ ಮಾಡಿದೆ. ಅರಬ್ಬೀ ಸಮುದ್ರದಲ್ಲಿ ಮೇಲೇಳುವ ರಕ್ಕಸ ಗಾತ್ರದ ಅಲೆಗಳನ್ನು ಕಂಡಾಗ ಎದೆ ನಡುಗುತ್ತಿದ್ದು ಮಳೆ ಇಂದೂ ಮುಂದುವರೆಯುವ ಸಾಧ್ಯತೆ ಇದೆ.
ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಕ್ಯಾರ್ ಚಂಡಮಾರುತ ಕರಾವಳಿಗರನ್ನು ಹೈರಾಣಾಗಿಸಿದೆ. ಕ್ಯಾರ್ ಚಂಡಮಾರುತ ಉಡುಪಿ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದೆ. ಕುರ್ಕಾಲು ಗ್ರಾಮದ ಸುಲೋಚನಾ ಹುಲ್ಲು ತರಲು ತೋಟಕ್ಕೆ ಹೋಗಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ರಭಸವಾದ ಸೆಳೆತಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಕುಕ್ಕೆಹಳ್ಳಿಯಲ್ಲಿ ರವಿ ಕುಲಾಲ್ ಗೆಳೆಯನ ಮನೆಗೆ ಮರವನ್ನು ಕಡಿಯುತ್ತಿದ್ದಾಗ ಕೊಂಬೆ ತಲೆಗೆ ಬಿದ್ದು ಮೃತಪಟ್ಟಿದ್ದಾರೆ.
Advertisement
Advertisement
ಚಂಡಮಾರುತದ ಅವಾಂತರ ಇಷ್ಟಕ್ಕೆ ಮುಗಿದಿಲ್ಲ. ಮಲ್ಪೆ ಬೀಚ್ ನಲ್ಲಿ ಗುರುವಾರ ಶುಕ್ರವಾರ ರಾತ್ರಿಯಿಂದಲೇ ಕಡಲಿನ ಆರ್ಭಟ ಮುಗಿಲು ಮುಟ್ಟಿತ್ತು. ಅರಬ್ಬೀ ಸಮುದ್ರದ ಅಲೆಗಳು ಮಲ್ಪೆ ಬೀಚ್ ನ್ನೇ ಆಪೋಷನ ಪಡೆದಿದೆ. 50 ಮೀಟರ್ ನಷ್ಟು ಸಮುದ್ರ ದಡದತ್ತ ಧಾವಿಸಿದೆ. ಹಬ್ಬದ ರಜೆ ಹಾಗೂ ವಾರಾಂತ್ಯದಲ್ಲಿ ಮೋಜು ಮಾಡಲು ಬೀಚ್ ಗೆ ಪ್ರವಾಸಿಗರು ಬಂದರೂ ಕ್ಯಾರ್ ಕ್ಯಾರೇ ಮಾಡಿಲ್ಲ.
Advertisement
ಸ್ಥಳೀಯ ಮಂಜುನಾಥ್ ಕಾಮತ್ ಮಾತನಾಡಿ, ಅಕ್ಟೋಬರ್ ತಿಂಗಳಲ್ಲಿ ಈ ರೀತಿಯ ವಾತಾವರಣ ನಾನೆಂದೂ ನೋಡಿಲ್ಲ. ಮಧ್ಯಾಹ್ನ ವೇಳೆಗೆ ಕತ್ತಲಾಗಿ ಬಿಡುವ ವಾತಾವರಣ ಇದೆ ಎಂದರು. ಮಳೆ ನಿಲ್ಲುವವರೆಗೆ ಶಾಲೆಗಳಿಗೆ ರಜೆ ವಿಸ್ತರಿಸಿ ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
Advertisement
ಚಂಡಮಾರುತದ ತೀವ್ರತೆ ಕಂಡು ಜಿಲ್ಲಾಧಿಕಾರಿ ಜಿ.ಜಗದೀಶ್ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗಿದೆ. ರೆಡ್ ಅಲರ್ಟ್ ಅವಧಿ ಮುಗಿದಿದ್ದು ಇನ್ನೆರಡು ದಿನ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಅಪಾರ ಪ್ರಮಾಣದ ಬೇಸಾಯ ಮಳೆಗೆ ನಾಶವಾಗಿದ್ದು ಕೃಷಿಕರು ಖುಷಿಯಿಲ್ಲದ ದೀಪಾವಳಿ ಮಾಡುವಂತಾಗಿದೆ.
https://www.facebook.com/publictv/videos/2344589592329516/