ಉಡುಪಿ: ಜಿಲ್ಲೆಯ ಕುಂದಾಪುರ ಜನರಲ್ಲಿ ಭಯ ಮೂಡಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದಿದೆ. ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಸಮೀಪದ ಮಾಲಾಡಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಚಿರತೆ ಸೆರೆ ಸಿಕ್ಕಿದೆ.
ಶಾಲೆಯ ಪಕ್ಕದ ಅಕೇಶಿಯ ಮತ್ತು ಮಾವಿನ ಮರದ ತೋಪಿನಲ್ಲಿ ಚಿರತೆ ಆಗಾಗ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಚಿರತೆ ನೋಡಿ ಸ್ಥಳೀಯರು ಭಯಭೀತರಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ತಿಂಗಳ ಹಿಂದೆ ಅರಣ್ಯ ಇಲಾಖೆ ಬೋನು ಇರಿಸಿತ್ತು. ಇಂದು ಚಿರತೆ ಬೋನಿಗೆ ಬಿದ್ದಿದ್ದು ಸುಮಾರು 10 ವರ್ಷ ಪ್ರಾಯದ ಗಂಡು ಚಿರತೆಯೆಂದು ಸೆರೆಸಿಕ್ಕಿದೆ.
Advertisement
Advertisement
ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸುವ ಮುನ್ನ ಜನ ಮುಗಿಬಿದ್ದು ಚಿರತೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಚಿರತೆಯನ್ನು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಕಾಡಿಗೆ ಬಿಟ್ಟಿದ್ದಾರೆ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಚಿರತೆ ಬೋನಿಗೆ ಬಿದ್ದಿತ್ತು. ಇದುವರೆಗೆ ಇದೆ ಪ್ರದೇಶದ ಸುತ್ತಮುತ್ತ ಒಟ್ಟು ಐದು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಚಿರತೆಯನ್ನು ಅರಣ್ಯ ಇಲಾಖೆ ಕಾಡಿಗೆ ಬಿಡುತ್ತದೆ, ಅದೇ ಚಿರತೆ ವಾಪಸ್ ಬರುತ್ತಿದ್ಯಾ ಎನ್ನುವ ಸಂಶಯ ಹಲವು ವರ್ಷದಿಂದ ಜನರನ್ನು ಕಾಡುತ್ತಿದೆ.