ಉಡುಪಿ: ಕೃಷ್ಣಂಗಾರಕ ಚತುರ್ಥಿಯಂದು ಗಂಗಾಸ್ನಾನ ಮಾಡಿದ್ರೆ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಆದ್ರೆ ಪಾಪ ಕಳೆದುಕೊಳ್ಳಲು ಗಂಗಾನದಿಯ ತಟಕ್ಕೆ ಹೋಗುವುದು ಎಲ್ಲರಿಗೂ ಕಷ್ಟಸಾಧ್ಯ. ಹೀಗಾಗಿ ಗಂಗೆ ಉದ್ಭವವಾದ ಉಡುಪಿಯ ಸ್ವರ್ಣೆಯಲ್ಲೇ ಮಿಂದು ನೂರಾರು ಮಂದಿ ಭಕ್ತರು ಇಂದು ಪುನೀತರಾದರು.
ಗಂಗಾಸ್ನಾನ ತುಂಗಾ ಪಾನ ಎಂಬ ಮಾತಿದೆ. ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ನಿವಾರಣೆ ಎಂಬ ನಂಬಿಕೆ ಭಕ್ತಕೋಟಿಯದ್ದು. ಈ ಹಿನ್ನೆಲೆಯಲ್ಲಿ ಮುರಳೀಲೋಲನ ನಗರಿ ಉಡುಪಿಯ ಸ್ವರ್ಣ ನದಿಯಲ್ಲಿ ತೀರ್ಥಸ್ನಾನ ಮಾಡಿ ಪುನೀತರಾದರು. ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗಂಗಾಪೂಜೆ ಮಾಡಿದರು. ಸ್ವರ್ಣಗೆ ಬಾಗಿನ ಅರ್ಪಿಸಿದರು. ಉತ್ತರಾಧಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ನೂರಾರು ಭಕ್ತರೊಂದಿಗೆ ಪ್ರಾತಃಕಾಲದ ಪೂಜೆಯನ್ನು ಸ್ವರ್ಣೆಯ ನದಿ ತಟದಲ್ಲಿ ನೆರವೇರಿಸಿದರು.
Advertisement
Advertisement
ಬಳಿಕ ಮಾತನಾಡಿದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕೃಷ್ಣಪಕ್ಷ ಚತುರ್ದಶಿ ತಿಥಿ ಮಂಗಳವಾರ ಬಂದ್ರೆ ಅಂದು ಕೃಷ್ಣಾಂಗಾರಕ ಚತುರ್ದಶಿ ಎಂದು ಅರ್ಥ. ಇಂದು ಪವಿತ್ರ ನದಿಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ ಆಗ್ತದೆ. ಈ ಭಾಗದಲ್ಲಿ ನೀರಲ್ಲಿ ಮುಳುಗು ಹಾಕುವಾಗ ನೀರಲ್ಲಿ ಟಣ್ ಟಣ್ ಸದ್ದು ಬರುತ್ತದೆ. ಪಾಪ ಸುಡುವ ಶಬ್ಧ ಅಂತ ವಾದಿರಾಜ ಸ್ವಾಮಿಗಳೇ ಬಣ್ಣಿಸಿದ್ದರು. ಕಾಡು, ನದಿ, ಬೆಟ್ಟ ಪರ್ವತ ಉಳಿದಷ್ಟು ಕಾಲ ಮನುಷ್ಯ ಸಂತತಿ ಭೂಮಿ ಯ ಮೇಲೆ ಉಳಿಯುತ್ತದೆ. ಹಾಗಾಗಿ ಪರಿಸರದ ರಕ್ಷಣೆ ಎಂದರೆ ನಮ್ಮನ್ನು ನಾವು ರಕ್ಷಿಸಿದಂತೆ. ಇಂತಹ ಆಚರಣೆಯಿಂದ ಪ್ರಾಕೃತಿಕ ಸಂಪತ್ತಿನ ಮೇಲೆ ಒಲವು ಮೂಡಿಸಲು ಸಾಧ್ಯವಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಇಂತಹ ಕಲ್ಪನೆ ಬರಬೇಕು ಎಂದು ಹೇಳಿದರು.
Advertisement
Advertisement
ಕೃಷ್ಣಂಗಾರಕ ಚತುರ್ಥಿಯ ಹಿನ್ನೆಲೆಯಲ್ಲ ನೂರಾರು ಭಕ್ತರು ನದಿಯಲ್ಲಿ ತೀರ್ಥಸ್ನಾನ ಮಾಡಿದರು. ತೀರ್ಥಸ್ನಾನದ ನಂತರ ಪೇಜಾವರಶ್ರೀ ಶೀಂಬ್ರ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸ್ವರ್ಣ ನದಿಯಲ್ಲಿ ಕರಾವಳಿಯ ಭಕ್ತರಿಗಿಂತ ಜಾಸ್ತಿ ರಾಜ್ಯದ ವಿವಿಧ ಭಾಗದ ಮಂದಿಯೇ ಪಾಲ್ಗೊಂಡರು. ಸ್ವರ್ಣ ನದಿಯಲ್ಲಿ ಮುಳುಗು ಹಾಕುವಾಗ ಚಟಪಟ ಎಂಬ ಸದ್ದು ಹೇಳಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಚಟಪಟ ಸದ್ದು ಕೇಳಿದ್ರೆ ಪಾಪಗಳೆಲ್ಲಾ ನಾಶವಾಯ್ತು ಎಂಬ ನಂಬಿಕೆಯಿದೆ. ಇದರ ಹಿಂದಿನ ಗುಟ್ಟು ವಿಜ್ಞಾನಿಗಳಿಂದ ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಬೆಂಗಳೂರಿನಿಂದ ತೀರ್ಥಸ್ನಾನ ಮಾಡಲು ಬಂದ ಭಕ್ತೆ ಸಾಕ್ಷಿ ಮಾತನಾಡಿ, ಮೊದಲ ಬಾರಿ ಬಂದು ತೀರ್ಥಸ್ನಾನ ಮಾಡಿದ್ದೇನೆ. ಮನಸ್ಸಿಗೆ ನೆಮ್ಮದಿ ಅನಿಸುತ್ತದೆ. ಪ್ರತೀ ವರ್ಷ ಬರುವ ಆಲೋಚನೆ ಇದೆ. ಪೇಜಾವರ ಕಿರಿಯ ಶ್ರೀಗಳ ಜೊತೆ ತೀರ್ಥಸ್ನಾನ ಮಾಡಿದ್ದು ಪುಣ್ಯದ ಫಲ ಎಂದರು.
ಒಟ್ಟಿನಲ್ಲಿ ವಿಶೇಷ ದಿನಗಳಲ್ಲಿ ಶೀಂಬ್ರ ಕ್ಷೇತ್ರಕ್ಕೆ ನೂರಾರು ಭಕ್ತರು ಬರುತ್ತಾರೆ. ಆದ್ರೆ ನದಿಸ್ನಾನಕ್ಕೆ ಬರುವ ಭಕ್ತರಿಗೆ ಸ್ನಾನಘಟ್ಟದ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ಮಾಡಿದ್ರೆ ದೇವಸ್ಥಾನ ಇನ್ನಷ್ಟು ಅಭಿವೃದ್ಧಿಯಾಗಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv