ಉಡುಪಿ: ರಾಜಕಾರಣಿಗಳು, ಪೊಲೀಸರು ಮಾತ್ರವಲ್ಲದೇ ಮಠಾಧೀಶರ ಫೋನ್ ಕೂಡ ಟ್ಯಾಪ್ ಮಾಡಲಾಗಿರುವ ವಿಚಾರವನ್ನು ಸಿಬಿಐ ವಿಚಾರಣೆಯ ವೇಳೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಬಾಯಿಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಆದೇಶವಿಲ್ಲದೆ ಫೋನ್ ಕದ್ದಾಲಿಕೆ ಮಾಡಿದ್ದರೆ ಅದು ತಪ್ಪು ಎಂದು ಹೇಳಿದ್ದಾರೆ.
ತನಿಖೆಯ ಎಲ್ಲಾ ಮಾಹಿತಿಗಳು ಸಿಬಿಐ ಬಳಿ ಇರುತ್ತವೆ. ಅಧಿಕೃತವಾಗಿ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಗೃಹ ಸಚಿವನಾಗಿ ಊಹಾಪೋಹಕ್ಕೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಎಸ್‍ಐಟಿ ಮಾಡಿರುವ ತನಿಖೆಯ ಸಂಪೂರ್ಣ ವಿವರ ಸಿಬಿಐಗೆ ನೀಡಿದ್ದೇವೆ. ಆದರೆ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಮಾತುಕತೆಯ ಕದ್ದಾಲಿಕೆ ಮಾಡುವುದು ತಪ್ಪು ಎಂದಿದ್ದಾರೆ.
Advertisement
Advertisement
ವಾರದೊಳಗೆ ಔರಾದ್ಕರ್ ವರದಿ ಜಾರಿ:
ಪೊಲೀಸರ ವೇತನ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಖಂಡಿತವಾಗಿಯೂ ಔರಾದ್ಕರ್ ವರದಿ ಜಾರಿಯಾಗುತ್ತದೆ. ಔರಾದ್ಕರ್ ವರದಿಗೆ ಎರಡು ಹಂತದಲ್ಲಿ ಸಚಿವ ಸಂಪುಟ ಒಪ್ಪಿಗೆಯನ್ನೂ ಕೊಟ್ಟಿದೆ. ಜೈಲು ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಬಿಟ್ಟು ಹೋಗಿತ್ತು. ನಮ್ಮ ಕ್ಯಾಬಿನೆಟ್ ನಲ್ಲಿ ಅದಕ್ಕೂ ಒಪ್ಪಿಗೆ ಕೊಟ್ಟಿದ್ದೇವೆ. ಆರ್ಥಿಕ ಇಲಾಖೆಯಿಂದ ಕೆಲವು ಸ್ಪಷ್ಟನೆ ಕೇಳಿದ್ದೇವೆ. ಒಂದು ವಾರದೊಳಗೆ ಸ್ಪಷ್ಟವಾದ ಸುತ್ತೋಲೆ ಹೊರಡಿಸ್ತೇವೆ ಎಂದು ಹೇಳಿದರು.
Advertisement
ಮೊಸರಲ್ಲಿ ಕಲ್ಲು ಹುಡುಕುತ್ತಾರೆ:
ಪ್ರಭಾವ ಬಳಸಿ ಉಪ ಚುನಾವಣೆ ಮುಂದೂಡಲಾಗಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ ಬೊಮ್ಮಾಯಿ, ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸುಪ್ರೀಂ ಆದೇಶದ ಬಗ್ಗೆ, ಚುನಾವಣಾ ಆಯೋಗದ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದರು.
Advertisement
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ಬಸವರಾಜ್ ಬೊಮ್ಮಾಯಿ ಉಡುಪಿಗೆ ಆಗಮಿಸಿದ್ದು ಶಾಸಕರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಅಲೋಕ್ ಕುಮಾರ್ ಹೇಳಿದ್ದೇನು?
ಪ್ರಮುಖವಾಗಿ ‘ದೊಡ್ಡವರು’ ನೀಡಿರುವ ಸೂಚನೆ ಮೇರೆಗೆ ರಾಜಕಾರಣಿಗಳು, ಪೊಲೀಸರು ಹಾಗೂ ಮಠಾಧೀಶರ ಫೋನ್ ಕೂಡ ಟ್ಯಾಪಿಂಗ್ ಮಾಡಲಾಗಿದ್ದು, ಆದಿಚುಂಚನಗಿರಿ ಸ್ವಾಮೀಜಿ ಅವರ ಫೋನ್ ಕೂಡ ಟ್ಯಾಪ್ ಆಗಿರುವ ಮಾಹಿತಿ ವಿಚಾರಣೆ ವೇಳೆ ಲಭಿಸಿದೆ. ಈ ಮಾಹಿತಿಯನ್ನು ಪೊಲೀಸರು ಕೇಂದ್ರ ಗೃಹ ಸಚಿವಾಲಯಕ್ಕೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಸ್ಯಾಂಡಲ್ ಸ್ಮಗ್ಲಿಂಗ್ ಸೇರಿದಂತೆ 20ಕ್ಕೂ ಹೆಚ್ಚು ಕೇಸಲ್ಲಿ ಭಾಗಿಯಾಗಿರುವ ವ್ಯಕ್ತಿಯ ಸಹಾಯ ಪಡೆಯಲಾಗಿತ್ತು. ಸ್ಯಾಂಡಲ್ ಸ್ಮಗ್ಲಿಂಗ್ ಕಳ್ಳನ ಗ್ಯಾಂಗ್ ಪತ್ತೆ ಹಚ್ಚುವ ನೆಪದಲ್ಲೇ ಟ್ಯಾಪಿಂಗ್ ನಡೆಸಲಾಗಿದೆ. ಶ್ರೀಗಳ ಫೋನ್ ಜೊತೆಗೆ ಮತ್ತಿಬ್ಬರ ಮೇಲೂ ಪೊಲೀಸರ ನಿಗಾ ವಹಿಸಿದ್ದರು. ನಿರ್ಮಲಾನಂದ ಶ್ರೀ ಜೊತೆ ಆಪ್ತರಾದ ಲಿಂಗೇಶ್, ರಮೇಶ್ ಅವರ ನಂಬರ್ ಗಳನ್ನು ಸರಿ ಸುಮಾರು 3 ತಿಂಗಳ ಕಾಲ ಟ್ಯಾಪ್ ಮಾಡಲಾಗಿತ್ತು ಎನ್ನಲಾಗಿದೆ.
ಎಚ್‍ಡಿಕೆ ಹೇಳಿದ್ದು ಏನು?
ಗುರುವಾರ ನಗರದ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ, ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿರುವುದಕ್ಕೆ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣೆ ಆಯೋಗ ಕೋರ್ಟ್ ಮುಂದೆ ಚುನಾವಣೆ ಮುಂದೂಡಬಹುದು ಎಂದು ಸ್ವಯಂಕೃತವಾಗಿ ಹೇಳಿದೆ. ಸಾಂವಿಧಾನಿಕ ಸಂಸ್ಥೆಯ ಈ ನಡವಳಿಕೆ ಸರಿಯಲ್ಲ. ಚುನಾವಣೆ ಆಯೋಗದ ಮೇಲೆ ಪ್ರಭಾವ ಬೀರಿದ್ದು ಯಾರು ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಆದರೆ ಕೇಂದ್ರ ಸರ್ಕಾರ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಗಳನ್ನು ಕೈ ಗೊಂಬೆ ಮಾಡಿಕೊಂಡಿದೆ ಎಂದು ಹೇಳಿದ್ದರು.