ಉಡುಪಿ: 9 ವರ್ಷಗಳ ಹಿಂದೆ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸಹಿಯನ್ನು ಫೋರ್ಜರಿ ಮಾಡಿ ಅವರ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯವು ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಉಡುಪಿಯ ಕೊಡವೂರು ಗ್ರಾಮದ ಮೂಡಬೆಟ್ಟು ನಿವಾಸಿ ನಿರಂಜನ್ ಚಿದಾನಂದ ಭಟ್ ಶಿಕ್ಷೆಗೆ ಗುರಿಯಾದ ಆರೋಪಿ. 2010ರಲ್ಲಿ ಈತ ವಂಚಿಸುವ ಮತ್ತು ತಾನೇ ಭಾರತ ದೇಶದ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಎಂದು ವ್ಯವಹರಿಸಿ ರಾಷ್ಟ್ರಪತಿಯ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಹಿಯನ್ನು ನಕಲಿ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದನು.
Advertisement
Advertisement
ಉಡುಪಿ ಕರಾವಳಿ ಬೈಪಾಸ್ ಬಳಿಯ ಸರ್ಫ್ ಆಂಡ್ ವೀವ್ ಎಂಬ ಹೆಸರಿನ ಸೈಬರ್ ಕೆಫೆಯಲ್ಲಿ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಈತ ನಕಲಿ ಇಮೇಲ್ ಐಡಿಯನ್ನು ತಯಾರಿಸಿ, ಅದರ ಮೂಲಕ ಅಬ್ದುಲ್ ಕಲಾಂ ಅವರಿಗೆ ಅಭಿನಂದನಾ ಪತ್ರ ವನ್ನು ಕಳುಹಿಸಿಕೊಟ್ಟಿದ್ದನು. ಅದಕ್ಕೆ ಉತ್ತರವಾಗಿ ಅಬ್ದುಲ್ ಕಲಾಂ ಕಳುಹಿಸಿದ್ದ ಕೃತಜ್ಞತಾ ಪತ್ರದಲ್ಲಿದ್ದ ಅವರ ಸಹಿಯನ್ನು ಆರೋಪಿ ನಕಲಿ ಮಾಡಿದ್ದ. ಮಾನವ ಕುಲಕ್ಕಾಗಿ ಅತ್ಯುನ್ನತ ಸೇವೆಗಳನ್ನು ಮಾಡಿದ ಎಂಜಿನಿಯರ್ಸ್ ಗಳಿಗೆ ಅಮೆರಿಕನ್ ಎಂಜಿನಿಯರಿಂಗ್ ಆರ್ಗನೈಝೇಶನ್ ನೀಡುವ ಹೂವೇರ್ ಪ್ರಶಸ್ತಿಗಾಗಿ ಆರೋಪಿಯು ನಾಮಪತ್ರವನ್ನು ಅಬ್ದುಲ್ ಕಲಾಂ ಅವರದ್ದು ಎನ್ನಲಾದ ನಕಲಿ ಶಿಫಾರಸ್ಸು ಪತ್ರದೊಂದಿಗೆ ಕಳುಹಿಸಿದ್ದನು.
Advertisement
Advertisement
ಅಬ್ದುಲ್ ಕಲಾಂ ಅವರ ನಕಲಿ ಇಮೇಲ್ ಐಡಿಯಿಂದ ಗೋಸ್ವಾಮಿ ಡಿ.ಯೋಗಿ ನ್ಯೂಯಾರ್ಕ್ ಇವರಿಗೆ ಭಾರತ ದೇಶದಲ್ಲಿರುವ 50 ಎಂಡಬ್ಲ್ಯೂ ಸೋಲಾರ್ ಥರ್ಮಲ್ ಪ್ಲಾಂಟ್‍ನ ಪ್ರಾಜೆಕ್ಟ್ ರಿಪೋರ್ಟನ್ನು ಕಳುಹಿಸಿಕೊಡುವಂತೆ ಕೋರಿ, ತಾನು ಸೃಷ್ಟಿಸಿದ ದಾಖಲೆಗಳು ನೈಜ ದಾಖಲೆಗಳು ಎಂದು ಬಳಸಿದ್ದ. ಈ ಮೂಲಕ ಆತ ತಾನೇ ರಾಷ್ಟ್ರಪತಿ ಅಬ್ದುಲ್ ಕಲಾಂ ಎಂದು ವ್ಯವಹರಿಸಿ ಅವರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆಯುಂಟು ಮಾಡಿದ್ದನು ಎಂದು ದೂರಲಾಗಿತ್ತು. ವಿಚಾರಣೆ ವೇಳೆ ನಿರಂಜನ್ ಚಿದಾನಂದ ಭಟ್ ಮೇಲಿದ್ದ ಆರೋಪ ಸಾಬೀತಾಗಿದ್ದು ಕೋರ್ಟ್ 3 ವರ್ಷ ಜೈಲು, 7 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv