ಉಡುಪಿ: ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಉಡುಪಿ ಮೂಲದ 34 ವರ್ಷದ ಯುವಕ ಮಾರ್ಚ್ 13ರಂದು ದುಬೈ ಪ್ರವಾಸ ಮಾಡಿದ್ದನು. ಮಾರ್ಚ್ 18ರಂದು ದುಬೈನಿಂದ ಆತ ಉಡುಪಿಗೆ ವಾಪಸಾಗಿದ್ದನು. ಈಗ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಾರ್ಚ್ 23ರಂದು ಯುವಕ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದನು. ಯುವಕನಿಗೆ ಜ್ವರ, ಶೀತ, ಕೆಮ್ಮು ಹೀಗೆ ಸೋಂಕಿನ ಲಕ್ಷಣಗಳು ಇತ್ತು. ಆತನ ಗಂಟಲ ದ್ರವವನ್ನು ಹಾಸನ ಪ್ರಯೋಗಾಲಯಕ್ಕೆ ಉಡುಪಿಯ ವೈದ್ಯರು ಕಳುಹಿಸಿದ್ದರು. ಇದೀಗ ವೈದ್ಯಕೀಯ ವರದಿ ಡಿಎಚ್‍ಒ ಕೈ ಸೇರಿದ್ದು, ಯುವಕನಿಗೆ ಕೊರೊನಾ ಲಕ್ಷಣಗಳು ಇರುವುದು ಸಾಭೀತಾಗಿದೆ.
Advertisement
Advertisement
ಇದು ಕೊರೊನಾದ ಪ್ರಾಥಮಿಕ ವರದಿಯಾಗಿದ್ದು, ಈ ವರದಿಯಲ್ಲೇ ಕೊರೊನಾದ ಅಂಶಗಳು ಪತ್ತೆಯಾಗಿದೆ ಎಂದು ಡಿಎಚ್‍ಒ ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ. ಕೊರೊನಾ ಪತ್ತೆಯಾಗಿರುವ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಆ ನಂತರ ಕ್ಯಾಬ್ ಮೂಲಕ ಮನೆಗೆ ಹೋಗಿದ್ದಾನೆ ಎಂದು ಅವರು ಮಾಹಿತಿ ಕೊಟ್ಟಿದ್ದಾರೆ. ಈತ ಯಾರ ಜೊತೆಯಲ್ಲಿ ಸಂಪರ್ಕ ಹೊಂದಿದ್ದ? ಐದು ದಿನಗಳ ಕಾಲ ಎಲ್ಲೆಲ್ಲಾ ಓಡಾಟ ನಡೆಸಿದ್ದಾನೆ ಎಂಬ ಬಗ್ಗೆ ವೈದ್ಯರು ಮಾಹಿತಿ ಕಲೆ ಹಾಕುತ್ತಿದ್ದಾರೆ.
Advertisement
Advertisement
ದೇಶಾದ್ಯಂತ ಮತ್ತು ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಇರುವಾಗಲೇ ಈತ ದುಬೈಗೆ ಯಾವುದೇ ಕೆಲಸದ ನಿಮಿತ್ತ ತೆರಳಿಲ್ಲ. ಬದಲಾಗಿ ದುಬೈ ಪ್ರವಾಸಕ್ಕೆಂದು ಹೋಗಿದ್ದಾನೆಂದು ಡಿಎಚ್‍ಒ ಮಾಹಿತಿ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಇರುವ ಯುವಕ ಕಳೆದ ಎರಡು ದಿನಗಳಿಂದ ಚಿಕಿತ್ಸೆಗೆ ಕೊಂಚ ಸ್ಪಂದಿಸುತ್ತಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಆತನಿಗೆ ಚಿಕಿತ್ಸೆ ಕೊಡಲಾಗುತ್ತಿದೆ.