ಉಡುಪಿ: ಜೀವನದ ಬಂಡಿ ದೂಡಲು ಆ ಆರು ಮಂದಿ ಭೂಮಿಬಿಟ್ಟು ಕಡಲಿಗೆ ಇಳಿದಿದ್ದರು. ಕಡಲು ಮುನಿದಿತ್ತು. ಬೋಟನ್ನು ಬುಡಮೇಲು ಮಾಡಿದ ಸುಂಟರಗಾಳಿ ಆರು ಜನರನ್ನು ಸಮುದ್ರಕ್ಕೆ ಎಸೆದಿತ್ತು.
ಉಡುಪಿ ಜಿಲ್ಲೆಯ ಕುಂದಾಪುರದ ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ 30 ನಾಟಿಕಲ್ ಮೈಲು ದೂರದಲ್ಲಿ ಮಲ್ಪೆ ನೋಂದಾಯಿತ ಮೀನುಗಾರಿಕಾ ಬೋಟ್‍ವೊಂದು ಭಾಗಶಃ ಮುಳುಗಿತ್ತು. ಸುತ್ತಮುತ್ತ ಒಂದೂ ಬೋಟ್ ಇರಲಿಲ್ಲ. ಕೊನೆಯ ಹಂತದಲ್ಲಿ ಜಿಪಿಎಸ್ ಮೂಲಕ ಮಾಹಿತಿ ರವಾನಿಸಲಾಯ್ತು. ಐದು ನಾಟಿಕಲ್ ಮೈಲ್ ದೂರದಲ್ಲಿದ್ದ ಮೀನುಗಾರಿಕಾ ಬೋಟ್ ಅಲ್ಲಿಗೆ ಬಂದು ಆ ಬೋಟ್ ನ ಸಹಾಯದಿಂದ ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.
Advertisement
ಮಲ್ಪೆಯ ಮೀನುಗಾರರಾದ ಬೋಟಿನ ಚಾಲಕ ವೆಂಕಟೇಶ ಹರಿಕಾಂತ, ನಂದೀಶ್ ಖಾರ್ವಿ, ಸಂತೋಷ, ಹುಲಿಯಪ್ಪ, ದುರ್ಗಪ್ಪ ಹರಿಕಾಂತ ಹಾಗೂ ಅಣ್ಣಪ್ಪ ಹರಿಕಾಂತ ಅವರು ಪ್ರಾಣಾಪಾಯದಿಂದ ಪಾರಾದವರು. ಮಲ್ಪೆಯ ನೋಂದಣಿ ಹೊಂದಿದ ಬೋಟ್ ಇದಾಗಿದ್ದು, ಕೋಡಿ ಕನ್ಯಾನದ ಜಯಲಕ್ಷ್ಮಿ ಅವರ ಹೆಸರಲ್ಲಿದೆ. ಜ.12 ರಂದು ರಾತ್ರಿ 10.30 ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಬೋಟ್ ತೆರಳಿದೆ. ಜ.14 ರಂದು ಗಂಗೊಳ್ಳಿಯಿಂದ ಸುಮಾರು 30 ನಾಟಿಕಲ್ ಮೈಲ್ ದೂರದಲ್ಲಿದ್ದಾಗ ಬೋಟಿನ ಹಿಂದಿನ ಹಲಗೆ ತುಂಡಾಗಿ, ಬೋಟಿನೊಳಗೆ ನೀರು ಹೋಗಿದೆ.
Advertisement
Advertisement
ಚಾಲಕ ವೆಂಕಟೇಶ್ ತಕ್ಷಣ ವೈಯರ್ ಲೆಸ್ ಫೋನ್ ಮೂಲಕ ಹತ್ತಿರದ ಬೋಟಿಗೆ ಸೂಚನೆ ಕೊಟ್ಟಿದ್ದು, ಕೂಡಲೇ ಅಲ್ಲೇ ಸಮೀಪದಲ್ಲಿದ್ದ ಸಾಯಿರಾಮ್ ಎನ್ನುವ ಬೋಟಿನವರು ಇದರಲ್ಲಿದ್ದ ಎಲ್ಲ 6 ಮಂದಿ ಮೀನುಗಾರರನ್ನು ಪಾರು ಮಾಡಿದ್ದಾರೆ. ಈ ಸಂಬಂಧ ಗಂಗೊಳ್ಳಿಯ ಕರಾವಳಿ ಕಾವಲು ಪೊಲೀಸ್ ಠಾಣೆಯ ಎಸ್‍ಐ ಸಂದೀಪ್ ಜಿ.ಎಸ್., ಎಎಸ್‍ಐ ಭಾಸ್ಕರ, ಸಿಬ್ಬಂದಿಯಾದ ಸುರೇಂದ್ರ, ಮತ್ತಿತರರು ಮಾಹಿತಿ ಪಡೆದುಕೊಂಡಿದ್ದಾರೆ. ಬೋಟ್ ಮುಳುಗಿದ್ದರಿಂದ 10 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
Advertisement
ಬೋಟ್ ಭಾಗಶಃ ಮುಳುಗಡೆಯಾಗಿದ್ದು, ಇದನ್ನು ಮೇಲೆತ್ತುವ ಸಂಬಂಧ ಮೀನುಗಾರರು 2 ಬೋಟಿನಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೋಟ್ ಮೇಲೆತ್ತುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.