– ಧರ್ಮ ಪ್ರಾಂತ್ಯದ ಎಲ್ಲಾ ಚರ್ಚ್ ಗಳಲ್ಲಿ ಕಾರ್ಯಾಗಾರ
ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಉಡುಪಿ ಬಿಷಪ್ ಸಮರ ಸಾರಿದ್ದಾರೆ. ಕೊರೊನಾ ವೈರಸ್ ಕರ್ನಾಟಕಕ್ಕೆ ಕಾಲಿಟ್ಟುರುವುದರಿಂದ ಸರ್ಕಾರ ಒಂದು ವಾರ ಹೈ ಅಲರ್ಟ್ ಘೋಷಿಸಿದೆ. ಸರ್ಕಾರ ಒಂದು ಕಡೆ ಜನರಲ್ಲಿ ಜನಜಾಗೃತಿ ಮಾಡಿಸುತ್ತಿದ್ದರೆ, ಧಾರ್ಮಿಕ ಕೇಂದ್ರಗಳಲ್ಲೂ ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆಯ ಮಂತ್ರ ಜಪಿಸಲಾಗುತ್ತಿದೆ.
ಉಡುಪಿಯ ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿ ಬರುವ ಎಲ್ಲಾ ಚರ್ಚ್ ಗಳಲ್ಲಿ ಕೊರೊನಾ ಜಾಗೃತಿ ಮೂಡಿಸಬೇಕೆಂದು ಜೆರಾಲ್ಡ್ ಐಸಾಕ್ ಲೋಬೊ ಆದೇಶ ಹೊರಡಿಸಿದ್ದಾರೆ. ಶನಿವಾರ ಮತ್ತು ಭಾನುವಾರದ ವಿಶೇಷ ಪ್ರಾರ್ಥನೆಯ ವೇಳೆ ಧರ್ಮಗುರುಗಳು ಚರ್ಚ್ ನಲ್ಲಿ ಕೊರೊನಾ ಸೋಂಕಿನ ಬಗ್ಗೆ ಮತ್ತು ಜನ ಜಾಗೃತಿಯ ಬಗ್ಗೆ ಕಿವಿಮಾತು ಹೇಳಿದ್ದಾರೆ. ಚರ್ಚ್ ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಗಳಲ್ಲಿ ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಪಾಠ ಮಾಡಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ಇರುವ ಕ್ರೈಸ್ತ ಧರ್ಮೀಯರು ಕೆಲ ಕಾಲ ಅಲ್ಲೇ ಇದ್ದು, ವೈರಸ್ ಭೀತಿ ನಿವಾರಣೆಯಾದ ಮೇಲೆ ಭಾರತಕ್ಕೆ ವಾಪಸ್ ಬರುವಂತೆ ಕರೆ ನೀಡಿದ್ದಾರೆ. ಕೊರೊನಾ ವಿರುದ್ಧ ಮನುಷ್ಯರಿಗೆ ಹೋರಾಡಲು ವಿಶೇಷ ಶಕ್ತಿ ಬರುವಂತೆ ಬೈಬಲ್‍ನ ಕೆಲ ಅಧ್ಯಾಯಗಳ ಪಾಠವನ್ನು ಭಾನುವಾರದ ಪಾರ್ಥನೆಯ ಸಂದರ್ಭದಲ್ಲಿ ಮಾಡಲಾಯಿತು.
ಕಲ್ಮಾಡಿ ವೆಲಂಕಣಿ ಚರ್ಚ್ ನಲ್ಲಿ, ನಾವು ಪೂಜೆ ಸಂದರ್ಭ ಜಾಗೃತಿ ಮೂಡಿಸಿದ್ದೇವೆ. ಭಕ್ತರು ಕೈಕುಲುಕದೆ ನಮಸ್ಕಾರ ಮಾಡುವಂತೆ ಸಲಹೆ ನೀಡಿದ್ದೇವೆ. ಸರ್ಕಾರಗಳ ಮಾರ್ಗದರ್ಶಿ ಸೂತ್ರ ಅನುಸರಿಸುತ್ತೇವೆ. ವಿದೇಶದಲ್ಲಿ ಇರುವವರಿಗೂ ಧೈರ್ಯ ತುಂಬಿದ್ದೇವೆ ಎಂದು ಧರ್ಮಗುರು ಫಾ. ಆಲ್ಬನ್ ಡಿಸೋಜಾ ಹೇಳಿದರು.
ಸ್ವತಃ ಉಡುಪಿಯ ಬಿಷಪ್ ಕೆಲ ಚರ್ಚ್ ಗಳಿಗೆ ಭೇಟಿ ಕೊಟ್ಟು ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸಿದ್ದಾರೆ. ಮುಂದಿನ ಶುಕ್ರವಾರ ಒಂದು ದಿನ ನಿರಂತರವಾಗಿ ಕೊರೊನಾ ವೈರಸ್‍ನ ಬಗ್ಗೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಭಕ್ತರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಚರ್ಚ್ ಗಳಲ್ಲಿ ಕ್ರೈಸ್ತ ಸಂಸ್ಥೆಗಳಲ್ಲಿ ಕಾರ್ಯಾಗಾರವನ್ನು ನಡೆಸಲು ಧರ್ಮಪ್ರಾಂತ್ಯ ತೀರ್ಮಾನಿಸಿದೆ.
ಜಾನ್ ಪೌಲ್ ಡಿಸೋಜಾ, ಅನಿತಾ, ರುಫೀನಾ, ಸುಷ್ಮಾ ಎಂಬವರು ಚರ್ಚ್ ಪ್ರಾರ್ಥನೆ ಮುಗಿನ ಮೇಲೆ ಭಕ್ತರ ಜೊತೆ ಸಮಾಲೋಚನೆ ಮಾಡಿದರು. ಧರ್ಮಗುರುಗಳು, ಸರ್ಕಾರದ ಆದೇಶ ಪಾಲಿಸುವುದಾಗಿ ಹೇಳಿದರು.