– 40 ವರ್ಷದಲ್ಲಿ ಮೊದಲ ಬಾರಿ ವೈಪರೀತ್ಯ
– ತಟಕ್ಕೆ ಬರುತ್ತಿದೆ ಜೆಲ್ಲಿ, ಕಾರ್ಗಿಲ್ ಮೀನುಗಳು
ಉಡುಪಿ: ಜಾಗತಿಕ ತಾಪಮಾನದಿಂದ ಮನುಷ್ಯ ತತ್ತರಿಸಿ ಹೋಗುತ್ತಿದ್ದಾನೆ. ಭೂಮಿಯ ಉಷ್ಣತೆ ಹೆಚ್ಚಿರೋದು ಮಾತ್ರವಲ್ಲ, ಸಮುದ್ರ ಕೂಡಾ ಕಾದು ಕೆಂಡದಂತಾಗಿದೆ. ಕಡಲು ಕುದಿಯುತ್ತಿರೋದ್ರಿಂದ ಮೊಗವೀರರು ಕಸುಬು ಕಳೆದುಕೊಂಡು ದೈವ ಬೊಬ್ಬರ್ಯನ ಮೊರೆ ಹೋಗುವಂತಾಗಿದೆ.
ಜಾಗತಿಕ ತಾಪಮಾನ ವಿಪರೀತವಾಗಿ ಏರುತ್ತಿದೆ. ತಾಪಮಾನದ ಏರಿಕೆಯಿಂದಾಗಿ ಸಮುದ್ರದ ಮೀನೆಲ್ಲಾ ಸಾಗರದ ತಳಕ್ಕೆ ಸೇರುತ್ತಿದೆ. ಮತ್ಸ್ಯ ಸಂಪತ್ತನ್ನೇ ನಂಬಿರುವ ಮೀನುಗಾರರಿಗೆ ಇದರಿಂದ ಕಸುಬೇ ಇಲ್ಲದಂತಾಗಿದೆ. ಬೆಳಗ್ಗೆಯಿಂದ ಸಂಜೆಯ ತನಕ ಸಮುದ್ರಕ್ಕೆ ಬಲೆ ಬೀಸಿದರೂ ನಿರೀಕ್ಷಿತ ಮೀನು ಸಿಗುತ್ತಿಲ್ಲ. ನೀರು ತಂಪಾಗುತ್ತಿಲ್ಲ, ಮೀನು ತಟಕ್ಕೋ, ನೀರಿನ ಮೇಲ್ಮೈಗೋ ಬರುತ್ತಲೇ ಇಲ್ಲ. ಕಳೆದ 40 ವರ್ಷಗಳಲ್ಲೆ ಮೊದಲ ಬಾರಿಗೆ ಈ ತರದ ಹವಾಮಾನ ವೈಪರಿತ್ಯವಾಗಿದೆ.
Advertisement
Advertisement
ವರ್ಷದಲ್ಲಿ ಮಳೆ ಹೆಚ್ಚಾದಾಗ ನೆರೆ ಬಂದಾಗ ಕಡಲು ಪ್ರಕ್ಷುಬ್ಧವಾಗುತ್ತದೆ. ಈ ಸಂದರ್ಭ ಯಥೇಚ್ಛ ಮತ್ಸ್ಯ ಸಂಪತ್ತು ಕಡಲಮಕ್ಕಳ ಪಾಲಾಗುತ್ತದೆ. ಆದರೆ ಈ ಬಾರಿ ಆಗದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಕಷ್ಟ ಮತ್ತು ಸುಖ ಬಂದಾಗ ಕಡಲ ಮಕ್ಕಳು ದೈವ ಬೊಬ್ಬರ್ಯನ ಮೊರೆ ಹೋಗ್ತಾರೆ. ಇದೀಗ ಅರಬ್ಬೀ ಸಮುದ್ರದಲ್ಲಿ ಮತ್ಸ್ಯಕ್ಷಾಮ ಎದುರಾಗಿದ್ದು ಮತ್ತೆ ಬೊಬ್ಬರ್ಯ ದೈವಕ್ಕೆ ದರ್ಶನ ಸೇವೆ ಕೊಟ್ಟಿದ್ದಾರೆ. ಮಲ್ಪೆ ಸಮೀಪದ ಕಲ್ಮಾಡಿ ಬೊಬ್ಬರ್ಯ ಪಾದೆಯಲ್ಲಿ ದರ್ಶನ ಸೇವೆ ನಡೆದಿದೆ. ಹವಾಮಾನ ವೈಪರೀತ್ಯ ನೀಗಿಸಿ ತಾಪಮಾನ ಇಳಿಸು ಎಂದು ಸಾವಿರಾರು ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಸಮುದ್ರದ ತಾಪಮಾನ ಏರಿದ್ದರಿಂದ ಜೆಲ್ಲಿ ಫಿಶ್ ಮತ್ತು ಕಾರ್ಗಿಲ್ ಫಿಶ್ ಎಂಬ ಆಕ್ರಮಣ ಮಾಡುವ ಮೀನು ಸಾಗರದ ತಟಕ್ಕೆ ಲಗ್ಗೆಯಿಡುತ್ತಿದೆ. ಈ ಮೀನುಗಳು ಲಕ್ಷಾಂತರ ರೂಪಾಯಿಯ ಬಲೆಯನ್ನು ಕತ್ತರಿಸಿ ಪುಡಿ ಮಾಡುತ್ತವೆ. ಇದನ್ನು ಓದಿ: ಸಮುದ್ರದಲ್ಲಿ ಸಿಕ್ತು ಟನ್ ಗಟ್ಟಲೇ ಅಪರೂಪದ ಕಾರ್ಗಿಲ್ ಮೀನು – ಮೀನುಗಾರರಲ್ಲಿ ಆತಂಕ
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪರ್ಸಿನ್ ಬೋಟ್ ಮೀನುಗಾರ ರಮೇಶ್ ಮೆಂಡನ್, ಸಮುದ್ರದ ನೀರು ಇಷ್ಟೊತ್ತಿಗೆ ತಂಪೇರಬೇಕಿತ್ತು. ಆದರೆ ತಾಪಮಾನ ತುಂಬಾ ಹೆಚ್ಚಾಗಿದೆ. ಮೀನಿನ ಬುಗ್ಗೆಗಳು ತಳ ಬಿಟ್ಟು ಮೇಲಕ್ಕೆ ಬರುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೀನುಗಾರಿಕೆಗೆ ಹೋದರೂ ಏನೂ ಗಿಟ್ಟುತ್ತಿಲ್ಲ ಎಂದರು. ನಾವು ದೈವ ದೇವರನ್ನು ನಂಬಿ, ಪ್ರಾಣದ ಹಂಗು ತೊರೆದು ಕಡಲಿಗೆ ಇಳಿಯುತ್ತೇವೆ. ಇದೀಗ ಮತ್ಸ್ಯಕ್ಷಾಮ ಬಂದಿದೆ. ಕಡಲರಾಜ ಬೊಬ್ಬರ್ಯನೇ ನಮ್ಮ ಕೈಹಿಡಿಬೇಕೆಂದು ದರ್ಶನ ಸೇವೆ ಕೊಟ್ಟಿದ್ದೇವೆ. ನಮ್ಮ ಭಾರವನ್ನು ದೇವರ ಮೇಲೆ ಹಾಕಿದ್ದೇವೆ ಎಂದು ಪೂವಪ್ಪ ಮೀನುಗಾರ ಹೇಳಿದರು.
Advertisement
ವಾಯುಭಾರ ಕುಸಿತ, ವಿಪರೀತ ಮಳೆಯಿಂದ ಆರಂಭದ ದಿನಗಳಲ್ಲಿ ಮೀನುಗಾರಿಕೆ ಆಗಿರಲಿಲ್ಲ. ನಾಡದೋಣಿ ಮೀನುಗಾರಿಕೆಗೆ ಈ ಬಾರಿ ಹವಾಮಾನ ಸಹಕರಿಸಿಯೇ ಇಲ್ಲ. ಇದೀಗ ಪರ್ಸೀನ್ ಮೀನುಗಾರಿಕೆ ಆರಂಭವಾಗುವ ಕಾಲಕ್ಕೆ ಸಮುದ್ರದ ನೀರು ಕುದಿಯುತ್ತಿದೆ. ಸಮುದ್ರವನ್ನೇ ನಂಬಿರುವ ಮೊಗವೀರರನ್ನು ಸಮುದ್ರರಾಜ ಕೈಹಿಡಿಯುತ್ತಾನಾ ನೋಡಬೇಕು.