ಉಡುಪಿ: ಕಂಕಣಬಲ ಕೂಡಿ ಬರದಿದ್ದರೆ ಈ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಬೇಕು. ಮದುವೆಯಾಗಿ ಬಹಳ ಸಮಯ ಸಂತಾನ ಆಗದಿದ್ದರೆ ದೇವರಿಗೆ ಬಾಳೆಹಣ್ಣು ಗೊನೆಯ ಹರಕೆ ಹೇಳಬೇಕು. ವರ್ಷ ಕಳೆಯೋದರ ಒಳಗೆ ಅನಂತ ಪದ್ಮನಾಭ ಆಶೀರ್ವದಿಸಿ ಇಷ್ಟಾರ್ಥ ನೆರವೇರಿಸುತ್ತಾನೆ. ಈ ಪವಾಡಕ್ಕೆ ಸಿಂಹ ಸಂಕ್ರಮಣ ಸಾಕ್ಷಿಯಾಗಿದೆ.
ಉಡುಪಿಯ ಪೆರ್ಡೂರಿನ ಅನಂತ ಪದ್ಮನಾಭ ದೇವಸ್ಥಾನದ ಮುಂದೆ ಇಂದು ಜನಜಾತ್ರೆ. ಬೀದಿ ತುಂಬೆಲ್ಲಾ ಹೊಸದಾಗಿ ಮದುವೆಯಾದ ನವ ಜೋಡಿಗಳು ಕಾಣಿಸುತ್ತಾರೆ. ನೂತನ ವಧುವರರು ಅನಂತಪದ್ಮನಾಭನಿಗೆ ಹರಕೆ ತೀರಿಸಲು ವರ್ಷಕ್ಕೊಮ್ಮೆ ಇಲ್ಲಿಗೆ ಬರುತ್ತಾರೆ. ಪೆರ್ಡೂರಿನಲ್ಲಿ ಸಿಂಹ ಸಂಕ್ರಮಣದಂದು ಭೇಟಿಕೊಟ್ಟರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಮದುವೆಯಾದ ಹೊಸ ಜೋಡಿ, ಮದುವೆ ನಂತರದ ಮಕ್ಕಳ ಜೊತೆ ಮತ್ತೆ ಆ ಜೋಡಿ ದೇವಸ್ಥಾನಕ್ಕೆ ಬರುತ್ತಾರೆ.
Advertisement
Advertisement
ನವ ವಧು ವರರಾದ ದಿವ್ಯಾ ಮತ್ತು ರಾಜೇಶ್ ಮಾತನಾಡಿ, ಎರಡು ತಿಂಗಳ ಹಿಂದೆ ಮದುವೆಯಾಗಿದೆ. ಕ್ಷೇತ್ರಕ್ಕೆ ಬಂದರೆ ದೇವರ ಆಶೀರ್ವಾದ ಸಿಗುತ್ತದೆ ಎನ್ನುವ ವಿಚಾರ ತಿಳಿಯಿತು. ಸುಖ ಸಂಸಾರದ ಪ್ರಾರ್ಥನೆಯನ್ನು ಮಾಡಿದ್ದೇವೆ. ತಂದೆ ತಾಯಿ ಇಲ್ಲಿಗೆ ಬರುತ್ತಿದ್ದರು. ಈಗ ನಾವು ಬಂದಿದ್ದೇವೆ ಎಂದು ಹೇಳಿದರು. ಸಂಗೀತಾ ಮಾತನಾಡಿ, ಮೂರು ವರ್ಷಗಳಿಂದ ಪೆರ್ಡೂರಿನ ದೇವಸ್ಥಾನಕ್ಕೆ ಬರುತ್ತಿದ್ದೇವೆ. ಮೊದಲ ವರ್ಷ ಇಬ್ಬರು ಬಂದಿದ್ದೆವು. ಈ ಬಾರಿ ಮಗುವಾಗಿದೆ. ಮೂರೂ ಜನ ಬಂದು ಹಣ್ಣು ಕಾಯಿ ಹರಕೆ ಕೊಟ್ಟಿದ್ದೇವೆ ಎಂದು ಹೇಳಿದರು.
Advertisement
ಅನಂತ ಪದ್ಮನಾಭ ದೇವರಿಗೆ ಬಾಳೆ ಹಣ್ಣು ಅಚ್ಚುಮೆಚ್ಚು. ನವ ಮತ್ತು ಹಿರಿಯ ದಂಪತಿಗಳು ಹಣ್ಣು ಮತ್ತು ಹೂವನ್ನು ಹರಕೆಯಾಗಿ ಅರ್ಪಿಸುತ್ತಾರೆ. ಸಂಕ್ರಾಂತಿಯಂದು ಸಾವಿರಾರು ಸಂಖ್ಯೆಯಲ್ಲಿ ನವ ವಿವಾಹಿತರು, ಅವರ ಕುಟುಂಬಸ್ಥರು ಕಿಕ್ಕಿರಿದು ತುಂಬಿಕೊಳ್ಳುತ್ತಾರೆ. ಹೂವು ಬಾಳೆಹಣ್ಣು ಹೊತ್ತು ದೇವಸ್ಥಾನಕ್ಕೆ ಬಂದು ಪೂಜಿಸುತ್ತಾರೆ. ಇಂದು ತಿರುಪತಿ ವೆಂಕಟರಮಣ ಸ್ವಾಮಿಯೇ ಏಳು ಬೆಟ್ಟ ಇಳಿದು ಪೆರ್ಡೂರಿಗೆ ಬಂದು ನೆಲೆಸುತ್ತಾನೆ ಎಂಬ ನಂಬಿಕೆಯಿದೆ.
Advertisement
ಅರ್ಚಕ ಗಣೇಶ್ ಅಡಿಗ ಅವರು ಮಾತನಾಡಿ, ಅನಂತ ಪದ್ಮನಾಭ ದೇವರು ಬಾಳೆಹಣ್ಣಿಗೆ ಒಲಿಯುವ ದೇವರು ಅಂತ ಪ್ರತೀತಿ ಇದೆ. ದೂರದ ಊರುಗಳಿಂದಲೂ ಭಕ್ತರು ಬಂದು ಹರಕೆ ತೀರಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ತಿಳಿಸಿದರು.
ಸಂತಾನ ಪ್ರಾಪ್ತಿಯಾಗಬೇಕಾದರೂ ಪೆರ್ಡೂರು ಅನಂತ ಪದ್ಮನಾಭನ ಮೊರೆ ಹೋಗುತ್ತಾರೆ. ಪುಷ್ಕರಣೆಯಲ್ಲಿ ತೀರ್ಥಸ್ನಾನ ಮಾಡುವುದು ಇಲ್ಲಿನ ಮತ್ತೊಂದು ವಿಶೇಷತೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ದೇವಸ್ಥಾನ ದಂಪತಿಗಳಿಂದ ತುಂಬಿಕೊಂಡಿರುವುದು ವಿಶೇಷ ಎಂದು ಹೇಳಿದರು.