– ಕುಂದಾಪುರದಲ್ಲಿ 11 ಆರೋಪಿಗಳ ಬಂಧನ
ಉಡುಪಿ: ಕೇರಳ ಕ್ಯಾಲಿಕಟ್ ವಿಮಾನ ನಿಲ್ದಾಣದಿಂದ ಭಟ್ಕಳಕ್ಕೆ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದ 11 ಮಂದಿಯನ್ನು ಉಡುಪಿ ಜಿಲ್ಲೆ ಕುಂದಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಭಟ್ಕಳ ಮೂಲದ ನವೀದ್, ಮಹಮ್ಮದ್ ಕಲೀಲ್, ಕಾಝಿಯಾ, ಮಹಮ್ಮದ್ ಅಸೀಮ್, ಫೈಝ್ ಅಹಮ್ಮದ್, ಮಹಮ್ಮದ್ ಅದ್ನಾನ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 1,152 ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೊಂದು ಕಾರಿನಲ್ಲಿದ್ದ ಮುಜ್ತಾಬಾ ಕಾಸೀಮ್, ಉಮೈರ್ ಅಹ್ಮದ್, ವಾಸಿಫ್ ಅಹ್ಮದ್, ಮುಝಾಮಿಲ್, ಜಮೀಲ್, ಮೀರಾ ಸಮೀರ್ ಎಂಬ 6 ಮಂದಿಯನ್ನ ವಿಚಾರಣೆಗಾಗಿ ಮಂಗಳೂರಿನ ಕಮಿಷನರ್ ಆಫ್ ಕಸ್ಟಮ್ಸ್ ಅವರಿಗೆ ಹಸ್ತಾಂತರ ಮಾಡಲಾಗಿದೆ.
Advertisement
Advertisement
ಸ್ವಾಧೀನ ಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 46 ಲಕ್ಷವಾಗಿದ್ದು, ವಾಹನಗಳ ಒಟ್ಟು ಮೌಲ್ಯ 10 ಲಕ್ಷ ಎಂದು ಅಂದಾಜಿಸಲಾಗಿದೆ. ದುಬೈನಿಂದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದ ಭಟ್ಕಳ ಮೂಲದ ವ್ಯಕ್ತಿಗಳು ಕ್ಯಾಲಿಕಟ್‍ನಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದಾರೆ. ಅಲ್ಲಿಂದ ಭಟ್ಕಳಕ್ಕೆ ಟವೇರಾ ಕಾರಿನಲ್ಲಿ ಹೊರಟಿದ್ದಾರೆ. ಚಿನ್ನ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಎಎಸ್‍ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
Advertisement
ವಶಕ್ಕೆ ಪಡೆದ ಆರೋಪಿಗಳನ್ನು ಮಂಗಳೂರು ಕಸ್ಟಮ್ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಕೇರಳಕ್ಕೆ ಅಕ್ರಮ ಚಿನ್ನ ವಿಮಾನ ಅಥವಾ ಸಮುದ್ರ ಮೂಲಕ ಬಂದಿರಬಹುದು ಎಂದು ಉಡುಪಿ ಪೊಲೀಸರು ಶಂಖೆ ವ್ಯಕ್ತಪಡಿಸಿದ್ದಾರೆ. ರೈಲಿನಲ್ಲಿ ತಪಾಸಣೆ ಇರುವುದರಿಂದ ಕಾರಿನ ಮೂಲಕ ಚಿನ್ನವನ್ನು ಭಟ್ಕಳಕ್ಕೆ ತಲುಪಿಸುವ ಯತ್ನ ನಡೆದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.