ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನ ಕುಟುಂಸ್ಥರು ಸೇರಿದಂತೆ ಅಭಿಮಾನಿಗಳ ಮನಸ್ಸಿನಲ್ಲಿ ನೋವು ತರಿಸಿದೆ. ರಾಜ್ಯದ ಹಲವು ಕಡೆಗಳಲ್ಲಿ ಅಪ್ಪು ಮೇಲಿನ ಅಭಿಮಾನದಿಂದ ಅಭಿಮಾನಿಗಳು ತಮ್ಮ ಗ್ರಾಮದ ರಸ್ತೆಗೆ, ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ ಮಾಡುತ್ತಿದ್ದಾರೆ. ಅದೇ ರೀತಿ ಶಿವಮೊಗ್ಗದ ಸಕ್ಕರೆಬೈಲು ಆನೆ ಬಿಡಾರದ ಮರಿಯಾನೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಎಂಬ ಹೆಸರು ನಾಮಕರಣ ಮಾಡಲಾಗಿದೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೇ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಶಿವಮೊಗ್ಗದ ಸಕ್ಕರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದರು. ವನ್ಯಜೀವಿ ರಕ್ಷಣೆಗೋಸ್ಕರ ಮತ್ತು ಅರಣ್ಯ ಸಂರಕ್ಷಣೆ ಕುರಿತ ಸಾಕ್ಷ್ಯ ಚಿತ್ರ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು. ಈ ವೇಳೆ ಬಿಡಾರದಲ್ಲಿದ್ದ ಮರಿಯಾನೆಗೆ ಅಪ್ಪಿ ಮುದ್ದಾಡಿದ್ದರು. ಈ ಮರಿ ಗಜಕ್ಕೆ ಪವರ್ ಸ್ಟಾರ್ ಹೆಸರು ಇಡಬೇಕು ಎಂಬುದು ಮಾವುತರು, ಕಾವಾಡಿಗಳು, ಪ್ರವಾಸಿಗರ ಆಸೆಯಾಗಿದೆ. ಹೀಗಾಗಿಯೇ ಅರಣ್ಯಾಧಿಕಾರಿಗಳು ಸಕ್ಕರೆಬೈಲು ಆನೆ ಬಿಡಾರದ ಮರಿಯಾನೆಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ ಮಾಡಿದ್ದಾರೆ.
ಆನೆ ಬಿಡಾರದ ನೇತ್ರ ಆನೆ ಜನ್ಮವಿತ್ತ ಗಂಡು ಮರಿಯಾನೆ ಇದಾಗಿದ್ದು, ನೇತ್ರ ಎಂಬ ಹೆಣ್ಣಾನೆ ಮತ್ತು ಅದರ ಮರಿಯಾನೆಯನ್ನು ಕ್ರಾಲ್‍ನಲ್ಲಿ ಕಂಡಿದ್ದ ಪುನೀತ್ ತಾಯಿ ಮಗುವಿನ ಬಗ್ಗೆ ಮಾವುತರಿಂದ, ವನ್ಯಜೀವಿ ವೈದ್ಯರಿಂದ ಮಾಹಿತಿ ಪಡೆದಿದ್ದರು. ಈ ವೇಳೆ ಕೆಲ ಸಮಯ ಈ ಗಜ ರಾಜಕುಮಾರನ ಬಳಿ ಆಟವಾಡಿ, ಮುದ್ದಾಡಿದ್ದರು.
ವೀನಿಂಗ್ ಎಂದರೆ, ಮರಿಯಾನೆಗಳಿಗೆ ಹುಟ್ಟಿದ ಕೂಡಲೇ ನಾಮಕರಣ ಮಾಡುವುದಿಲ್ಲ. ಬದಲಾಗಿ ಮರಿಯಾನೆಯನ್ನು ಅದರ ತಾಯಿಯಾನೆಯಿಂದ ಬೇರ್ಪಡಿಸುವ ಪ್ರಕ್ರಿಯೆ ನಡೆಸಿ, ಅದನ್ನು ಪ್ರತ್ಯೇಕವಾಗಿ ಇರಿಸಿದ ಬಳಿಕ ಮರಿಯಾನೆಗೆ ನಾಮಕರಣ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನ ವೀನಿಂಗ್ ಎಂದು ಕರೆಯುತ್ತಾರೆ. ಇದನ್ನೂ ಓದಿ: ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?
ಇದೀಗ ಸಕ್ಕರೆಬೈಲು ಆನೆ ಬಿಡಾರದಲ್ಲಿ ನೇತ್ರ ಮತ್ತು ಮರಿಯಾನೆಯನ್ನು ಒತ್ತಾಯಪೂರ್ವಕವಾಗಿ ಬೇರ್ಪಡಿಸುವ ವೀನಿಂಗ್ ಕಾರ್ಯವನ್ನು ಇಂದು ಅರಣ್ಯ ಇಲಾಖೆ ಮಾಡಿದ್ದು, ತಾಯಿಯಿಂದ ಬೇರ್ಪಡುವ ಮರಿಯಾನೆಗೆ ಪುನೀತ್ ರಾಜ್ ಕುಮಾರ್ ಎಂದು ಹೆಸರಿಡಲಾಗಿದೆ. ಈ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು, ಅಕಾಲಿಕವಾಗಿ ನಮ್ಮನ್ನೆಲ್ಲಾ ಅಗಲಿದ ಪವರ್ ಸ್ಟಾರ್‍ಗೆ ಗೌರವ ಸೂಚಿಸಿದೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ
ಸಾಮಾನ್ಯವಾಗಿ ಸಕ್ಕರೆಬೈಲು ಆನೆ ಬಿಡಾರದಲ್ಲಿ ಜನಿಸುವ ಮರಿಯಾನೆಗಳಿಗೆ, ನೆಚ್ಚಿನ ಅರಣ್ಯಾಧಿಕಾರಿಗಳದ್ದೋ, ಅಥವಾ ದೇವರ ಹೆಸರು ಇಡುವುದು ಸಾಮಾನ್ಯ. ಆದರೆ ಇದೇ ಪ್ರಥಮವಾಗಿ ನಟನೊಬ್ಬರ ಅದರಲ್ಲೂ, ಎಲ್ಲರಿಗೂ ಪ್ರೀತಿ ಪಾತ್ರರಾಗಿರುವ ಪವರ್ ಸ್ಟಾರ್ ಪುನೀತ್ ಹೆಸರು ನಾಮಕರಣ ಮಾಡಲಾಗಿದ್ದು, ಇನ್ಮುಂದೆ ಬಿಡಾರಕ್ಕೆ ಬರುವ ಪ್ರವಾಸಿಗರು, ಈ ಗಜನಿಗೆ ಪುನೀತ್ ಅಥವಾ ಅಪ್ಪು ಎಂದು ಕೂಗಿ ಕರೆಯಬಹುದಾಗಿದೆ.