ತುಮಕೂರು: ಇತ್ತಿಚಿನ ದಿನದಲ್ಲಿ ತುಮಕೂರು (Tumakuru) ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಒಂದೇ ದಿನ ಎರಡು ದೇವಸ್ಥಾನದಲ್ಲಿ ಕಳ್ಳತನ ನಡೆದಿರೋದು ಇದಕ್ಕೆ ಸಾಕ್ಷಿಯಾಗಿದೆ.
ತಿಪಟೂರು (Tiptur) ನಗರದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಕಳ್ಳನೋರ್ವ ಹುಂಡಿ ಕಳ್ಳತನ (Temple Theft) ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ದೇವಸ್ಥಾನದ ವ್ಯವಸ್ಥಾಪಕನ ಮನೆಗೆ ಚಿಲಕ ಹಾಕಿ, ಸಿಸಿಟಿವಿ ನಾಶ ಮಾಡಿ ಕಳ್ಳ ದೇವಸ್ಥಾನದ ಒಳಗೆ ನುಗ್ಗಿದ್ದಾನೆ. ಈ ವೇಳೆ ಸಂಶಯ ಬಂದ ಮ್ಯಾನೇಜರ್ ಪಕ್ಕದ ಮನೆಯವರಿಗೆ ಕಾಲ್ ಮಾಡಿ ತಿಳಿಸಿದಾಗ ದೇವಸ್ಥಾನದಲ್ಲಿ ಕಳ್ಳನ ಕೈಚಳಕ ಗೊತ್ತಾಗಿದೆ. ಆಗ ಸ್ಥಳೀಯರು ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕಳ್ಳನ ಬಳಿ ಕಳ್ಳತನ ಮಾಡಿದ ಎರಡು ಚಿನ್ನದ ತಾಳಿ, ರಾಡು, ಚಾಕು, ಸ್ಕ್ರೂ ಡ್ರೈವರ್ ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ನಾನು, ಸಿಎಂ ಬ್ರದರ್ಸ್ ಥರ ಕೆಲಸ ಮಾಡ್ತಿದ್ದೀವಿ – ಮತ್ತೆ ಡಿಕೆಶಿ ಒಗ್ಗಟ್ಟಿನ ಮಂತ್ರ
ಅದೇ ರೀತಿ ಗುಬ್ಬಿ (Gubbi) ತಾಲೂಕಿನ ಯಕ್ಕಲಕಟ್ಟೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಾಸ್ಕ್ ಧರಿಸಿ, ರಾಡ್ ಹಿಡಿದು ದೇವಾಲಯ ಪ್ರವೇಶಿಸಿದ ಕಳ್ಳರು ದೇವಾಲಯದ ಹುಂಡಿ ಮುರಿದು ಹೊತ್ತೊಯ್ದಿದ್ದಾರೆ. ಈ ಸಂಬಂಧ ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪುಟ್ಟ ಮಗುವಿಗೆ ಮನಬಂದಂತೆ ಥಳಿಸಿದ ಕೇರ್‌ಟೇಕರ್

