ರಾಜಕುಮಾರ್, ಕೆಜಿಎಫ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಮೂರು ಚಿತ್ರಗಳನ್ನು ಅನೌನ್ಸ್ ಮಾಡಿದೆ. ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಬಹುತೇಕ ಶೂಟಿಂಗ್ ಮುಗಿದಿದ್ದು, ರಿಷಭ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಮೊನ್ನೆಯಷ್ಟೇ ಶ್ರೀಮುರುಳಿ ನಟನೆಯ ‘ಬಘೀರ’ ಸಿನಿಮಾದ ಮುಹೂರ್ತವಾಗಿದೆ. ಅಲ್ಲದೇ, ಯುವರಾಜ್ ಕುಮಾರ್ ಗಾಗಿಯೂ ಒಂದು ಚಿತ್ರವನ್ನು ಮಾಡುವುದಾಗಿ ಘೋಷಿಸಿದೆ. ಈ ನಡುವೆ ಪ್ಯಾನ್ ಇಂಡಿಯಾ ಸಿನಿಮಾದ ಸುದ್ದಿ ಸಿಕ್ಕಿದೆ.
ನಾಲ್ಕು ಸಿನಿಮಾಗಳನ್ನು ಸದ್ಯ ನಿರ್ಮಾಣ ಮಾಡುತ್ತಿದ್ದರೂ, ಇವುಗಳ ಜತೆ ಮತ್ತೆರುಡು ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿರುವ ಅವರು ಮತ್ತೆರಡು ಭಾರೀ ಬಜೆಟ್ ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲಿದೆ. ಒಂದು ಸಿನಿಮಾ 2024ರಲ್ಲಿ ತೆರೆಗೆ ಬಂದರೆ, ಮತ್ತೊಂದು ಸಿನಿಮಾ 2025ರಲ್ಲಿ ತೆರೆಗೆ ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?
ಎರಡು ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ್ ಅವರೇ ಹೇಳಿದ್ದರೂ, ಆ ಸಿನಿಮಾಗಳು ಯಾವವು? ನಿರ್ದೇಶಕರು ಯಾರು? ನಟರು ಯಾರು? ಹೀಗೆ ಯಾವುದೇ ಮಾಹಿತಿಯನ್ನೂ ಅವರು ನೀಡಿಲ್ಲ. ಯಾವಾಗಿಂದ ಶುರುವಾಗುತ್ತದೆ ಎನ್ನುವ ವಿಷಯವನ್ನೂ ಅವರು ಹಂಚಿಕೊಂಡಿಲ್ಲ. ಆದರೆ, ಎರಡು ಭಾರೀ ಬಜೆಟ್ ಚಿತ್ರಗಳನ್ನು ತಯಾರಿಸಲಾಗುವುದು ಎಂದಷ್ಟೇ ಹೇಳಿದ್ದಾರೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ
ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಎಂಬ ಪ್ಯಾನ್ ಇಂಡಿಯಾ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಪ್ರಭಾಸ್ ನಟನೆಯ ಈ ಸಿನಿಮಾ ಐದಕ್ಕೂ ಹೆಚ್ಚು ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ರಿಲೀಸ್ ನಂತರವೇ ಆ ಎರಡೂ ಪ್ಯಾನ್ ಇಂಡಿಯಾ ಸಿನಿಮಾಗಳ ಕುರಿತು ಮಾಹಿತಿ ಸಿಗಬಹುದು.