ದಿಸ್ಪುರ್: ಇಬ್ಬರು ವಂಚಕರು ಮನೆ ಮನೆಗೆ ತೆರಳಿ ಚಿನ್ನವನ್ನು ಸ್ವಚ್ಛಮಾಡಿ ಕೊಡುವುದಾಗಿ ತಿಳಿಸಿ ಮಹಿಳೆಯೊಬ್ಬರಿಂದ ಚಿನ್ನದ ಬಳೆಗಳನ್ನು ವಂಚಿಸಿರುವ ಘಟನೆ ಗುವಾಹಟಿಯ ಪನ್‍ಬಜಾರ್‍ನಲ್ಲಿ ನಡೆದಿದೆ.
ಮಂಗಳವಾರ ಮನೆ ಬಾಗಿಲಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಮಹಿಳೆಯೊಬ್ಬರ ಚಿನ್ನದ ಬಳೆಗಳನ್ನು ಪತಂಜಲಿ ಕ್ಲೀನಿಂಗ್ ಪೌಡರ್‍ನಿಂದ ಸ್ವಚ್ಛಮಾಡಿ ಕೊಡುವುದಾಗಿ ತಿಳಿಸಿದ್ದಾರೆ. ಮಹಿಳೆ ಇದನ್ನು ನಂಬಿ ತನ್ನ ಚಿನ್ನದ ಬಳೆಗಳನ್ನು ನೀಡಿದ್ದಾಳೆ. ಸ್ವಲ್ಪ ಸಮಯದಲ್ಲಿ ಪೌಡರ್ ತುಂಬಿದ ಬಳೆಗಳನ್ನು ವಂಚಕರು ಮಹಿಳೆಯ ಕೈಗೆ ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜಗಳನ್ನು ಮುದ್ರಿಸಿದ ಉತ್ಪನ್ನಗಳ ಮಾರಾಟ – ಅಮೆಜಾನ್ ವಿರುದ್ಧ ಎಫ್‍ಐಆರ್
ಪೌಡರ್ ಕೊಳೆಯನ್ನು ತೆಗೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿ, ಕೆಲವು ಗಂಟೆಗಳವರೆಗೆ ಹಾಗೆಯೇ ಇಡುವಂತೆ ತಿಳಿಸಿ ಪರಾರಿಯಾಗಿದ್ದಾರೆ. ಆದರೆ ಮಹಿಳೆ ಸ್ವಲ್ಪ ಸಮಯ ಬಟ್ಟು ಬಳೆಯನ್ನು ಪರೀಕ್ಷಿಸಲು ಬಂದಾಗ ಆಘಾತ ಕಾದಿತ್ತು. ಆಕೆಯ ಚಿನ್ನದ ಬಳೆಯ ಬದಲಿಗೆ ವಂಚಕರು ಪ್ಲಾಸ್ಟಿಕ್ ಬಳೆ ನೀಡಿ ಪರಾರಿಯಾಗಿರುವ ವಿಚಾರ ಮಹಿಳೆಗೆ ತಡವಾಗಿ ತಿಳಿದಿದೆ.
ಸಂತ್ರಸ್ತೆ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ದೂರು ದಾಖಲಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಈ ರೀತಿಯಾಗಿ ಅಪರಿಚಿತರನ್ನು ನಂಬುವುದು ತಪ್ಪು ಎಂದು ಆಕೆಗೆ ತಿಳಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಿಸಲು, ಮರುಬಳಕೆ ಮಾಡಲು ನೋಯ್ಡಾದಲ್ಲಿ ಹೊಸ ಅಭಿಯಾನ
ಪಾನ್‍ಬಜಾರ್ ಪೊಲೀಸ್ ಠಾಣೆಯ ಅಧಿಕಾರಿ ರುಸ್ತಮ್ ರಾಜಬ್ರಹ್ಮ ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗುವುದು ಎಂದಿದ್ದಾರೆ.