ಹುಬ್ಬಳ್ಳಿ: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಇನ್ನೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲೇ ಸಿಲುಕಿಕೊಂಡ ಚಾಲಕ ಮತ್ತು ಕ್ಲೀನರನ್ನು ಸ್ಥಳಿಯರು ಹರಸಾಹಸಪಟ್ಟು ಹೊರತೆಗೆದ ಘಟನೆ ನಡೆದಿದೆ.
ನಗರದ ಐಟಿ ಪಾರ್ಕ್ ಮುಂಭಾಗದಲ್ಲಿ ಕಬ್ಬಿಣದ ವಸ್ತುಗಳನ್ನು ಹೊತ್ತು ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಹೊರಟಿದ್ದ ಕೆಎ 35 .7756 ನಂಬರಿನ ಲಾರಿ, ಮುಂದೆ ಸಾಗುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿಯ ಮುಂದಿನ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಲಾರಿ ಜಾಲಕ ರಮೇಶ್ ಮತ್ತು ಕ್ಲೀನರ್ ಇಬ್ಬರು ಲಾರಿಯಲ್ಲಿ ಸಿಲುಕಿಕೊಂಡಿದ್ದರು.
ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದ ಲಾರಿ ಚಾಲಕ ರಮೇಶ್ ಅವರನ್ನು ಕಂಡ ಸ್ಥಳೀಯರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಲಾರಿಯ ಮುಂಭಾಗದವನ್ನು ಸತತ ಒಂದು ಗಂಟೆಗಳ ಕಾಲ ಒಡೆದು ತೆಗೆದು ಬಳಿಕ ಲಾರಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಗಂಭೀರ ಗಾಯವಾಗಿದ್ದ ಚಾಲಕ ರಮೇಶ್ ಅವರನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಬಂಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.