ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಮಾತನಾಡಿದ್ದ ಮಾಜಿ ಕಾಂಗ್ರೆಸ್ ನಾಯಕ, ಹಿರಿಯ ವಕೀಲ, ಪ್ರಸ್ತುತ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಾಗುವ ಸಾಧ್ಯತೆಯಿದೆ.
ವಕೀಲರಾದ ವಿನೀತ್ ಜಿಂದಾಲ್ ಮತ್ತು ಶಶಾಂಕ್ ಶೇಖರ್ ಝಾ ಅವರು, ಭಾರತೀಯ ನ್ಯಾಯಾಂಗದ ವಿರುದ್ಧ ಹೇಳಿಕೆ ನೀಡಿ ಘನತೆಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಒಪ್ಪಿಗೆ ನೀಡುವಂತೆ ಭಾರತದ ಅಟಾರ್ನಿ ಜನರಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗದ ವಿರುದ್ಧ ಸಿಬಲ್ ಮಾಡಿದ ಟೀಕೆಗಳ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಕೂಡ ಟೀಕಿಸಿದೆ. ಹಿರಿಯ ವಕೀಲ ಮತ್ತು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಕಪಿಲ್ ಸಿಬಲ್ ಅವರು ಇಂತಹ ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರ. ಅವರು ಕಾನೂನು ಕ್ಷೇತ್ರದ ಧೀಮಂತರು ಮತ್ತು ದೇಶದ ಮಾಜಿ ಕಾನೂನು ಸಚಿವರೂ ಆಗಿದ್ದಾರೆ. ಎರಡು, ಮೂರು ಪ್ರಕರಣದಲ್ಲಿ ಸೋತಿದ್ದಕ್ಕೆ ನ್ಯಾಯಾಂಗವನ್ನು ಗುರಿಯಾಗಿ ಮಾತನಾಡುವುದು ಸರಿಯಲ್ಲ. ನ್ಯಾಯಾಂಗವು ಮುಕ್ತ ಮತ್ತು ಸ್ವತಂತ್ರ ಸಂಸ್ಥೆಯಾಗಿದೆ. ಅದರ ಮೇಲೆ ದಾಳಿ ಮಾಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್ ಬ್ಯಾನ್? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?
ನೀವು ದುರ್ಬಲ ಪ್ರಕರಣವನ್ನು ತೆಗೆದುಕೊಂಡು ನ್ಯಾಯಾಲಯದಲ್ಲಿ ಸೋತರೆ ನ್ಯಾಯಾಧೀಶರು ಮತ್ತು ನ್ಯಾಯಾಂಗವನ್ನು ದೂಷಿಸಲು ಬರುವುದಿಲ್ಲ ಎಂದು ಮಿಶ್ರಾ ಅಭಿಪ್ರಾಯ ವ್ಯಕ್ತಪಡಿದ್ದಾರೆ.
ಸಿಬಲ್ ಹೇಳಿದ್ದೇನು?
ಸುಪ್ರೀಂ ಕೋರ್ಟ್ ಮೇಲೆ ನನಗೆ ಯಾವುದೇ ಭರವಸೆ ಇಲ್ಲ. ಸುಪ್ರೀಂ ಕೋರ್ಟ್‌ನಿಂದ ಪರಿಹಾರ ಸಿಗುತ್ತದೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಭಾವನೆಯಾಗಿದೆ. ನಾನು 50 ವರ್ಷಗಳ ಕಾಲ ವಕೀಲಿಕೆ ಪೂರ್ಣಗೊಳಿಸಿದ ನಂತರ ಈ ಮಾತನ್ನು ಹೇಳುತ್ತಿದ್ದೇನೆ.
ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ, ಗುಜರಾತ್ ಗಲಭೆ ವೇಳೆ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಆಗ ಅಗ್ನಿಶಾಮಕ ದಳವನ್ನು ಪೊಲೀಸರು ಕರೆಸಿರಲಿಲ್ಲ. ಇದು ಉದ್ದೇಶಪೂರ್ವಕ ಹಿಂಸಾಚಾರ ಎಂದು ನಾನು ದಾಖಲೆ ಸಮೇತ ವಾದ ಮಾಡಿದ್ದೆ. ಆದರೆ ಕೋರ್ಟ್ ಇದನ್ನು ಪರಿಗಣಿಸಲೇ ಇಲ್ಲ. ಸಾಮಾಜಿಕ ಕಾರ್ಯಕರ್ತೆ, ತೀಸ್ತಾ ಸೆಟಲ್ವಾಡ್ ಬಗ್ಗೆ ವಾದ-ಪ್ರತಿವಾದ ನಡೆಯಲಿಲ್ಲ. ಆದರೂ ಅವರನ್ನು ತೀರ್ಪಿನಲ್ಲಿ ದೂಷಿಸಲಾಗಿದೆ.
ಯಾವಾಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಪೀಠವನ್ನು ನಿಗದಿಪಡಿಸುತ್ತಾರೋ ಅಂಥ ನ್ಯಾಯಾಂಗ ಸ್ವತಂತ್ರವಲ್ಲ. ಈಗ ಮಾತನಾಡುವ ಕಾಲ ಬಂದಿದೆ. ನಾವು ಈಗ ಮಾತನಾಡದೇ ಇನ್ಯಾರು ಮಾತನಾಡಬೇಕು?