ಕೊಪ್ಪಳ: ಕ್ಷುಲ್ಲಕ ಕಾರಣಕ್ಕಾಗಿ 2 ಗುಂಪುಗಳ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಒಟ್ಟು 58 ಜನರ ವಿರುದ್ಧ ದೂರು, ಪ್ರತಿದೂರು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದು, ಇದೀಗ ಹುಲಿಹೈದರ್ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
2 ಗುಂಪುಗಳ ನಡುವೆ ಗಲಾಟೆ ನಡೆದು ಇಬ್ಬರು ಮೃತಪಟ್ಟಿದ್ದು, ಇದರಿಂದಾಗಿ ಹುಲಿಹೈದರ್ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮನೆಯಿಂದ ಹೊರಬಂದವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ. ತಡರಾತ್ರಿ ಕೊಲೆಯಾದ ಇಬ್ಬರ ಅಂತ್ಯಸಂಸ್ಕಾರವನ್ನು ಪೊಲೀಸರ ಸಮ್ಮುಖದಲ್ಲಿಯೇ ಮಾಡಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಹಾಗೂ ಮೂವರು ಡಿವೈಎಸ್‌ಪಿ, 8 ಜನ ಸಿಪಿಐಗಳು ಮತ್ತು ಸಿಬ್ಬಂದಿ ಸಾಕ್ಷಿಯಾಗಿದ್ದರು.
Advertisement
Advertisement
ಹುಲಿಹೈದರ್‌ನಲ್ಲಿ ನಡೆದ ಗಲಾಟೆ ಹಿನ್ನೆಲೆ ಒಟ್ಟು 58 ಜನರ ವಿರುದ್ಧ ದೂರು, ಪ್ರತಿ ದೂರು ದಾಖಲಾಗಿದ್ದು, ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಲು ವಿಶೇಷ ಪೊಲೀಸ್ ತನಿಖಾ ತಂಡ ರಚನೆ ಮಾಡಲಾಗಿದೆ. ದೂರು ದಾಖಲಾದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳು ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾದ ದೃಶ್ಯ ಆಧರಿಸಿ ಪೊಲೀಸರು 25ಕ್ಕಿಂತಲೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ವಿಚಾರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ನಮೋ ಕ್ಲಿನಿಕ್‌ಗೆ ಟಕ್ಕರ್ ಕೊಡಲು ಪಂಜಾಬ್‌ನಲ್ಲಿ `ಆಮ್ ಆದ್ಮಿ ಕ್ಲಿನಿಕ್’- ಆ.15ಕ್ಕೆ 100 ಕ್ಲಿನಿಕ್ ಓಪನ್
Advertisement
Advertisement
ಬಳ್ಳಾರಿ ವಲಯ ಐಜಿಪಿ ಮನೀಷ್ 2 ದಿನವೂ ಹುಲಿಹೈದರ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಜತೆ ಚರ್ಚೆ ಮಾಡಿದ ಐಜಿಪಿ ಮನೀಷ್ ಗಲಾಟೆ ನಂತರದ ಬೆಳವಣಿಗೆಯ ಕುರಿತು ಮಾಹಿತಿ ಪಡೆದಿದ್ದಾರೆ. ಹುಲಿಹೈದರ್ ಗ್ರಾಮದಲ್ಲಾದ ಸಾವುಗಳಿಂದ ಭಯಭೀತರಾದ ಜನರು ಮನೆ ಖಾಲಿ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಮವೂ ಖಾಲಿ ಖಾಲಿಯಾಗಿ ಕಾಣುತ್ತಿದೆ. ಅಲ್ಲದೇ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ – ಅಧಿಕೃತ ಆದೇಶ