ಬೆಂಗಳೂರು: ಸ್ಪಾಮ್ ಮೇಲ್ ಕಳುಹಿಸಿ ಜನರ ಮಾಹಿತಿ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾವುದು ಹಳೆಯ ಸಂಗತಿ. ಈಗ ಸೈಬರ್ ಕಳ್ಳರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಹಕರ ಮೊಬೈಲ್‍ಗೆ ಒಟಿಪಿ ಬಂದರೂ ದೂರದಲ್ಲಿದ್ದುಕೊಂಡೇ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಹೌದು, ಬ್ಯಾಂಕ್ ಖಾತೆಯಿಂದಲೇ ಹಣ ಎಗರಿಸುತ್ತಿದ್ದ ಖತರ್ನಾಕ್ ಇಬ್ಬರು ಕಳ್ಳರನ್ನು ಬೆಂಗಳೂರಿನ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ರಾಘವೇಂದ್ರ (24) ಹಾಗೂ ರಾಕೇಶ್ ಕುಮಾರ್ (24) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಸ್ವೈಪಿಂಗ್ ಯಂತ್ರ, 5 ಎಟಿಎಂ ಕಾರ್ಡ್, ಒಂದು ಕಾರು, 7 ಮೊಬೈಲ್, ಎರಡು ಹೆಚ್ಚುವರಿ ಸಿಮ್ ಕಾರ್ಡ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
Advertisement
ನಕಲಿ ಕಂಪನಿ ಓಪನ್ ಮಾಡಿದ್ರು:
ರಾಘವೇಂದ್ರ ಬಿಕಾಂ ಪದವೀಧರನಾಗಿದ್ದು, ಈ ಹಿಂದೆ ಹಣಕಾಸು ವಹಿವಾಟು ಸಂಬಂಧಿಸಿದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದರಿಂದಾಗಿ ಆನ್‍ಲೈನ್ ಮೂಲಕ ಹಣ ವರ್ಗಾವಣೆ ಬಗ್ಗೆ ಹೆಚ್ಚಿ ಜ್ಞಾನ ಪಡೆದುಕೊಂಡಿದ್ದ. ಆರ್ಥಿಕವಾಗಿ ಬೇಗ ಅಭಿವೃದ್ಧಿ ಹೊಂದಬೇಕು, ಬೇಗನೇ ಹಣಗಳಿಸಬೇಕು ಎನ್ನುವ ಉದ್ದೇಶದಿಂದ ‘ಲೀಡ್ ಮ್ಯಾನೇಜ್ ಮೆಂಟ್’ ಹೆಸರಿನಲ್ಲಿ ನಕಲಿ ಕಂಪೆನಿ ಪ್ರಾರಂಭಿಸಿದ್ದಾನೆ. ಹಣ ವರ್ಗಾವಣೆ ಮಾಡಿಕೊಳ್ಳಲು 2017ರಂದು ಹೊಸೂರು ರಸ್ತೆಯ ಎಸ್‍ಬಿಐ ನಲ್ಲಿ ಲೀಡ್ ಮ್ಯಾನೇಜ್‍ಮೆಂಟ್ ಕಂಪೆನಿ ಹೆಸರಿನಲ್ಲಿ ಖಾತೆ ತೆರೆದಿದ್ದಾನೆ. ಈ ಕೃತ್ಯಕ್ಕೆ ತನ್ನ ಸ್ನೇಹಿತ ರಾಕೇಶ್‍ನನ್ನು ರಾಘವೇಂದ್ರ ಸೇರಿಸಿಕೊಂಡಿದ್ದಾನೆ.
Advertisement
ಗ್ರಾಹಕರಿಗೆ ಕರೆ:
ಇಬ್ಬರು ಸೇರಿದ ನಂತರ ಜಸ್ಟ್ ಡಯಲ್ ಮೂಲಕ ಲಾಜೆಸ್ಟಿಕ್ ಡೀಲರ್ಸ್, ಅರ್ಥ್ ಮೂವರ್ಸ್, ಸೋಲಾರ್ ಡೀಲರ್ಸ್ ಸೇರಿದಂತೆ ಕೆಲವು ವ್ಯಾಪಾರಿಗಳ ದೂರವಾಣಿ ಸಂಖ್ಯೆ ಕಲೆಹಾಕಿದ್ದಾರೆ. ವ್ಯಾಪಾರಿಗಳಿಗೆ ಕರೆ ಮಾಡಿ, ನಾವು ಕಸ್ಟಮರ್ ಲೀಡ್ ಕಂಪನಿ ನಡೆಸುತ್ತಿದ್ದು, ಕಮಿಷನ್ ಆಧಾರದಲ್ಲಿ ಗ್ರಾಹಕರನ್ನು ಹುಡುಕಿಕೊಡುತ್ತೇವೆ ಅಂತಾ ಹೇಳಿಕೊಂಡು, ನಿಮ್ಮನ್ನು ಭೇಟಿಯಾಗಬೇಕು ಅಂತಾ ಕೇಳುತ್ತಿದ್ದರು.
Advertisement
ಷರತ್ತು ಹೇಳಿ ಫೋಟೋ ತೆಗೆದ್ರು:
ಆರೋಪಿಗಳ ಕರೆಗೆ ಪ್ರತಿಕ್ರಿಯಿಸಿದ್ದ ವ್ಯಾಪಾರಿಗಳು ಭೇಟಿಗೆ ಸಮಯ ನೀಡುತ್ತಿದ್ದರು. ವ್ಯಾಪಾರಿಗಳ ಬಳಿಗೆ ಹೋಗುತ್ತಿದ್ದ ರಾಘವೇಂದ್ರ ಹಾಗೂ ರಾಕೇಶ್ ಆತ್ಮೀಯವಾಗಿ ಮಾತುಕತೆ ನಡೆಸುತ್ತಿದ್ದರು. ನಮ್ಮ ಕಂಪನಿಯಿಂದ ನಿಮಗೆ ಸೇವೆ ಒದಗಿಸಲು ಕೆಲವು ಷರತ್ತುಗಳಿವೆ. ನಿಮ್ಮ ಬಳಿ ಇರುವ ಎಟಿಎಂ ಕಾರ್ಡ್ ನಿಂದ 200 ರೂ. ಪಾವತಿ ಮಾಡಬೇಕು. ಕಂಪನಿಯ ಫಾರ್ಮ್ ನಲ್ಲಿ ತುಂಬಿ, ಸಹಿ ಮಾಡಬೇಕು ಅಂತಾ ಹೇಳುತ್ತಿದ್ದರು.
ಇಬ್ಬರ ಮಾತಿಗೆ ಮರುಳಾಗುವ ವ್ಯಾಪಾರಿಗಳು ತಮ್ಮ ಎಟಿಎಂ/ ಕ್ರೆಡಿಟ್ ಕಾರ್ಡ್ ಇವರಿಗೆ ನೀಡುತ್ತಿದ್ದರು. ಕಾರ್ಡ್ ಸಿಕ್ಕಿದ ಕೂಡಲೇ ತಮ್ಮ ಸ್ವೈಪಿಂಗ್ ಯಂತ್ರದಿಂದ ಹಣವನ್ನು ಖಾತೆಗೆ ಜಮ ಮಾಡುತ್ತಾರೆ. ಈ ವೇಳೆ ಫಾರ್ಮ್ ಭರ್ತಿ ಮಾಡುವಂತೆ ಹೇಳಿ ವ್ಯಾಪಾರಿಗಳ ಗಮನವನ್ನು ಬೇರೆ ಕಡೆಗೆ ಸೆಳೆದು ಕಾರ್ಡ್ ನ ಎರಡೂ ಬದಿಯ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅಷ್ಟಕ್ಕೆ ಬಿಡದೇ ಅವರ ಬಳಿ ಮೊಬೈಲ್ ಪಡೆದು, ಲೀಡ್ ಮ್ಯಾನೇಜ್ ಮೆಂಟ್ ಆ್ಯಪ್ ಡೌನ್‍ಲೋಡ್ ಹಾಗೂ ‘ಮೈ ಎಸ್‍ಎಂಎಸ್ ಆ್ಯಪ್’ ಗಳನ್ನು ಕೂಡ ಡೌನ್‍ಲೋಡ್ ಮಾಡಿ ಮಸೇಜ್‍ಗಳನ್ನು ಸಿಂಕ್ ಮಾಡಿ ಪಾಸ್‍ವರ್ಡ್ ಪಡೆದು ಅಲ್ಲಿಂದ ಹೊರಡುತ್ತಿದ್ದರು.
ಅಸಲಿ ಆಟ ಆರಂಭ:
ಆನ್‍ಲೈನ್ ವ್ಯವಹಾರ ಗಳನ್ನು ಡೆಬಿಟ್/ ಕ್ರೆಡಿಟ್ ಕಾರ್ಡ್ ಗಳಿಂದ ಅಥವಾ ಆನ್‍ಲೈನ್ ಖಾತೆಗಳಿಂದ ಮಾಡಬಹುದು. ಹೀಗಾಗಿ ಇವರು ತಮ್ಮ ವ್ಯವಹಾರಗಳನ್ನು ಕಾರ್ಡ್ ಮೂಲಕವೇ ಮಾಡುತ್ತಿದ್ದರು. ಫೋಟೋ ಕ್ಲಿಕ್ಕಿಸಿದ್ದರಿಂದ ಕಾರ್ಡ್ ನ 16 ಸಂಖ್ಯೆ ಜೊತೆಗೆ ವಿವರ ಸಹ ಲಭ್ಯವಾಗುತ್ತದೆ. ಹಿಂದುಗಡೆ ಫೋಟೋ ಕ್ಲಿಕ್ ಮಾಡಿದ್ದರಿಂದ ಸಿವಿವಿ ನಂಬರ್ ಸಹ ಸಿಕ್ಕಿರುತ್ತದೆ. ಈ ನಂಬರ್ ಗಳನ್ನು ಹಾಕಿ ವ್ಯವಹಾರ ಆರಂಭಿಸಿದ ಒಂದನೇ ಸ್ಟೆಪ್ ಮುಗಿದ ಕೂಡಲೇ ಗ್ರಾಹಕರ ಮೊಬೈಲಿಗೆ ಒಟಿಪಿ ಸಂಖ್ಯೆ ಬರುತ್ತದೆ. ಕೂಡಲೇ ಆರೋಪಿ ರಾಘವೇಂದ್ರ ಗ್ರಾಹಕರ ‘ಮೈ ಎಸ್‍ಎಂಎಸ್ ಆ್ಯಪ್’ ಖಾತೆ ಲಾಗಿನ್ ಆಗಿ ಆ ಒಟಿಪಿಯನ್ನು ಪಡೆದು ಪಡೆದು ಖಾತೆಯಿಂದಲೇ ಹಣವನ್ನು ಎಗರಿಸುತ್ತಿದ್ದ.
ಸಿಕ್ಕಿಬಿದ್ದಿದ್ದು ಹೇಗೆ?:
ನಾಗರಬಾವಿ ವ್ಯಕ್ತಿಯೊಬ್ಬರಿಂದ ರಾಘವೇಂದ್ರ ಹಾಗೂ ರಾಕೇಶ್ ಮಾಹಿತಿ ಪಡೆದಿದ್ದರು. ಕೆಲ ದಿನಗಳ ನಂತರ ಮಾಹಿತಿ ನೀಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 75 ಸಾವಿರ ರೂ. ವರ್ಗಾವಣೆ ಆಗಿದೆ. ಯಾವುದೇ ವ್ಯವಹಾರ ನಡೆಸದೇ ಹಣ ಡ್ರಾ ಆಗಿದ್ದನ್ನು ನೋಡಿ ಅವರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಬೆನ್ನತ್ತಿದ್ದ ಸಿಸಿಬಿ ಪೊಲೀಸರಿಗೆ ವಂಚಕರ ಈ ಕೃತ್ಯ ಬೆಳಕಿಗೆ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv