– ಕ್ಯಾಬಿನೆಟ್ ಕಾರ್ಯದರ್ಶಿಗೆ ಆಯುಕ್ತರಿಂದ ಪ್ರತ್ಯೇಕ ದೂರು
ನವದೆಹಲಿ: ಎಸ್ಐಆರ್ (SIR) ಪ್ರಕ್ರಿಯೆ ವಿರೋಧಿ, ಸಿಇಸಿ ಜ್ಞಾನೇಶ್ ಕುಮಾರ್ (Gyanesh Kumar) ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.
ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು, ಚುನಾವಣಾ ಆಯೋಗದ (Election Commission) ಹಿರಿಯ ಅಧಿಕಾರಿಯೊಬ್ಬರ ಕಾರ್ಯವೈಖರಿಯ ವಿರುದ್ಧ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ. ಆದರೆ, ಈ ಉನ್ನತ ಅಧಿಕಾರಿಯು ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ ಎಂಬುದು ಆರ್ಟಿಐ (ಮಾಹಿತಿ ಹಕ್ಕು ಕಾಯ್ದೆ) ಅಡಿಯಲ್ಲಿ ಪಡೆದ ಉತ್ತರದಲ್ಲಿ ಬಹಿರಂಗವಾಗಿದೆ.
ಆರ್ಟಿಐ ಕಾರ್ಯಕರ್ತ ಲೋಕೇಶ್ ಕೆ. ಬಾತ್ರಾ (ನಿವೃತ್ತ) ಅವರಿಗೆ ನೀಡಿದ ಉತ್ತರದಲ್ಲಿ ಆಕ್ಷೇಪ ಎತ್ತಿದ ವಿಚಾರ ಬಹಿರಂಗವಾಗಿದ್ದು, ಈ ಆರ್ಟಿಐ ಉತ್ತರವನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ.
ಆರ್ಟಿಐ ಉತ್ತರದಲ್ಲಿ ಉಲ್ಲೇಖವಾಗಿರುವಂತೆ, 2024ರ ಸೆಪ್ಟೆಂಬರ್ 2 ರಂದು ಕ್ಯಾಬಿನೆಟ್ನ ನೇಮಕಾತಿ ಸಮಿತಿಯಿಂದ ಆಯೋಗಕ್ಕೆ ನಿಯೋಜಿಸಲ್ಪಟ್ಟ ಹಿರಿಯ ಉಪ ಚುನಾವಣಾ ಆಯುಕ್ತ (Sr DEC) ಮನೀಶ್ ಗಾರ್ಗ್ (ಐಎಎಸ್) ಅವರ ಕಾರ್ಯವೈಖರಿಗೆ ವಿರೋಧ ವ್ಯಕ್ತವಾಗಿತ್ತು. ಗಾರ್ಗ್ ವಿರುದ್ಧ, ಸಂಧು ಮತ್ತು ಜೋಶಿ ಅವರು ಜುಲೈ 29 ರಂದು ಸೋಮನಾಥನ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದರು. ಆದಾಗ್ಯೂ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.
ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಇಬ್ಬರು ವೈಯಕ್ತಿಕವಾಗಿ ಪತ್ರ ಬರೆದಿದಾರೆಯೇ ಹೊರತು, ಅದು ಇಡೀ ಆಯೋಗದ ಅಧಿಕೃತ ಅಭಿಪ್ರಾಯವಲ್ಲ. ಅಲ್ಲದೇ ಈ ಹಂತದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದು ಉಚಿತವಲ್ಲ ಎಂದು ಸೋಮನಾಥನ್ ಅಭಿಪ್ರಾಯಪಟ್ಟಿದ್ದಾರೆ.
ಆರ್ಟಿಐ ಉತ್ತರದಲ್ಲಿ ಏನಿದೆ?
ಆರ್ಟಿಐ ಉತ್ತರದಲ್ಲಿ, ಇಬ್ಬರೂ ಚುನಾವಣಾ ಆಯುಕ್ತರು (ECs) ತಿಳಿಸಿರುವ ಪ್ರಕಾರ, ಮನೀಶ್ ಗಾರ್ಗ್ ಅವರು ಡಿಇಸಿ (ಆಡಳಿತ) ವಿಭಾಗದ ‘ಲಿಂಕ್ ಆಫೀಸರ್’ ಆಗಿ ಅಧಿಕಾರ ವಹಿಸಿಕೊಂಡ ನಂತರ, ಆಯೋಗದೊಂದಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸದೆಯೇ, ತಮ್ಮ ಸಮಾನ ಶ್ರೇಣಿಯ ಹಾಗೂ ಹಿರಿಯ ಅಧಿಕಾರಿಗಳ ಕೆಲಸದ ಹಂಚಿಕೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದಾರೆ. ಆಯೋಗದ ಪೂರ್ವಾನುಮತಿ ಅಥವಾ ಚರ್ಚೆಯಿಲ್ಲದೆ ಇಂತಹ ಕ್ರಮಗಳನ್ನು ಕೈಗೊಳ್ಳದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಪದೇ ಪದೇ ಮೌಖಿಕ ಹಾಗೂ ಲಿಖಿತ ಸೂಚನೆಗಳನ್ನ ನೀಡಿದ್ದರೂ, ಈ ಘಟನೆ ನಡೆದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಚುನಾವಣಾ ಆಯೋಗದೊಳಗೆ ಕೆಲಸದ ಹಂಚಿಕೆಗೆ ಸಂಬಂಧಿಸಿದ ಆದೇಶವೊಂದನ್ನು ಹೊರಡಿಸಿದ ನಂತರ, ಸಂಧು ಮತ್ತು ಜೋಶಿ ಅವರು ಸೋಮನಾಥನ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದರು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿತ್ತು. ಇದಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಈ ಆದೇಶವು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನ ಸೇರಿಸುವುದು, ತೆಗೆದುಹಾಕುವುದು ಮತ್ತು ದಾಖಲೆಗಳನ್ನು ನವೀಕರಿಸುವ ಅಧಿಕಾರವನ್ನ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಬಿಡುವ ಬದಲು, ಚುನಾವಣಾ ಆಯೋಗದ ಕೇಂದ್ರ ಕಚೇರಿಯಲ್ಲೇ ಕೇಂದ್ರೀಕರಿಸುವ ಅಪಾಯವನ್ನು ಹೊಂದಿತ್ತು.
ಚುನಾವಣಾ ಆಯುಕ್ತರು ನೀಡಿದ್ದ ದೂರಿನಲ್ಲಿ ಏನಿತ್ತು?
ಸೋಮನಾಥನ್ ಅವರಿಗೆ ಪ್ರತ್ಯೇಕವಾಗಿ ಸಲ್ಲಿಸಿದ ತಮ್ಮ ದೂರುಗಳಲ್ಲಿ, ಗರ್ಗ್ ಅವರು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023 ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು.
ಈ ದೂರಿನ ಕುರಿತು ಆಗಸ್ಟ್ 3ರಂದು ಸಿದ್ಧಪಡಿಸಲಾದ ಕ್ಯಾಬಿನೆಟ್ ಟಿಪ್ಪಣಿಯಲ್ಲಿ, “ಈ ಸಂಬಂಧ, ಈ ವಿಷಯದ ಕುರಿತು ಮುಖ್ಯ ಚುನಾವಣಾ ಆಯುಕ್ತರ ಅಭಿಪ್ರಾಯವನ್ನು ಕೋರಬಹುದು. ಅದರಂತೆ, ಅನುಮೋದನೆಗಾಗಿ ಕರಡು ಡಿಒ (ಅಧಿಕೃತ ಪತ್ರ) ಸಲ್ಲಿಸಲಾಗಿದೆ” ಎಂದು ಉಲ್ಲೇಖಿಸಲಾಗಿತ್ತು. ಮರುದಿನ ಸಿದ್ಧಪಡಿಸಲಾದ ಮತ್ತೊಂದು ಕರಡು ಟಿಪ್ಪಣಿಯಲ್ಲಿ, ಇಬ್ಬರು ಚುನಾವಣಾ ಆಯುಕ್ತರು ಅಧಿಕಾರಿಯೊಬ್ಬರ ವಿರುದ್ಧ ಎತ್ತಿರುವ ದೂರುಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುವುದು, ಇಡೀ ಚುನಾವಣಾ ಆಯೋಗದಿಂದ ಅಧಿಕೃತ ಸಂವಹನ ಬಂದಿರದ ಸಂದರ್ಭದಲ್ಲಿ, ಸಾಂವಿಧಾನಿಕ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗಬಹುದು ಎಂದು ಹೇಳಲಾಗಿತ್ತು.
ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುವ ಉದ್ದೇಶದಿಂದ ಅದನ್ನು ಕಾರ್ಯಾಂಗದ ಹಸ್ತಕ್ಷೇಪದಿಂದ ಮುಕ್ತವಾಗಿಡಲಾಗಿದೆ. ಆಯೋಗದ ಕಾರ್ಯವೈಖರಿ ಮತ್ತು ಕಾರ್ಯನಿರ್ವಹಣೆಯು ಚುನಾವಣಾ ಆಯೋಗದ ನಿಯಮಗಳು ಹಾಗೂ ಮಾರ್ಗಸೂಚಿಗಳಿಂದ ನಿಯಂತ್ರಿಸಲ್ಪಡುತ್ತದೆ.
ಮೇಲೆ ಉಲ್ಲೇಖಿಸಲಾದ ಪತ್ರಗಳು ಚುನಾವಣಾ ಆಯುಕ್ತರು ವೈಯಕ್ತಿಕ ಸಾಮರ್ಥ್ಯದಲ್ಲಿ ಸಲ್ಲಿಸಿರುವ ಸಂವಹನಗಳಾಗಿವೆ. ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾದರೂ, ಅವುಗಳನ್ನು ಇಡೀ ಚುನಾವಣಾ ಆಯೋಗದ ಅಧಿಕೃತ ಸಂವಹನವೆಂದು ಪರಿಗಣಿಸಲಾಗದು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.

