ಚಿಕ್ಕಬಳ್ಳಾಪುರ: ತಿನ್ನಲು ಊಟವಿಲ್ಲದೆ ಮಣ್ಣು ತಿಂದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ತಾಲೂಕಿನ ಕುಮ್ಮರವಾಂಡ್ಲಪಲ್ಲಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಮೂಲದ ಮಹೇಶ್-ನಾಗಮಣಿ ಬಡ ದಂಪತಿ ಕೂಲಿ ಅರಸಿ ಕಳೆದ 10 ವರ್ಷಗಳ ಹಿಂದೆ ಅನಂತಪುರ ಜಿಲ್ಲೆಗೆ ತೆರಳಿದ್ದರು. ಜಿಲ್ಲೆಯ ಕದಿರಿ ತಾಲೂಕಿನ ಕುಮ್ಮರವಾಂಡ್ಲಪಲ್ಲಿ ಹಮಾಲಿ ಕಾಲೋನಿಯಲ್ಲಿ ಕಳೆದ 3 ವರ್ಷಗಳಿಂದ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದ ಮಹೇಶ್, ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದರು.
Advertisement
Advertisement
ಈ ಬಡ ದಂಪತಿಗೆ ಆರು ಜನ ಮಕ್ಕಳಿದ್ದು ಪತಿ ಮಹೇಶ್ ಕೆಲಸಕ್ಕೆ ಹೋದರೆ, ಪತ್ನಿ ನಾಗಮಣಿ ಮದ್ಯವ್ಯಸನಿಯಾಗಿದ್ದಾಳೆ. ಹೀಗಾಗಿ ವಿಪರೀತ ಕುಡಿದು ಆಡುಗೆ ಮಾಡದೆ ಹಾಗೆಯೇ ಮಲಗಿ ಬಿಡುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಒಂದು ಗಂಡು ಮಗು ಹಾಗೂ ಹೆಣ್ಣು ಮಗು ಊಟ ಇಲ್ಲದೆ ಮಣ್ಣು ತಿಂದು ಸಾವನ್ನಪ್ಪಿದ್ದಾರೆ.
Advertisement
ಘಟನೆ ನಂತರ ಸ್ಥಳೀಯರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಇವರ ಪರಿಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಸಹಾಯದಿಂದ ಉಳಿದ ನಾಲ್ಕು ಮಕ್ಕಳಿಗೆ ಆಶ್ರಯ ಕಲ್ಪಿಸಲಾಗಿದೆ. ಉಳಿದಂತೆ ಪೊಲೀಸರೇ ಬಡ ದಂಪತಿಗೆ ಮನೆ ಕಟ್ಟಿಸಿಕೊಡಲು ಮುಂದಾಗಿದ್ದಾರೆ.
Advertisement
ಬಡ ದಂಪತಿಯ ಸ್ಥಿತಿ ಬಹಳಷ್ಟು ಶೋಚನೀಯವಾಗಿದ್ದು ತಿನ್ನಲು ಊಟವೂ ಇಲ್ಲ. ಮಲಗಲು ಮನೆಯೂ ಇಲ್ಲ. ಮುರುಕಲು ಗುಡಿಸಲಿನಲ್ಲೇ ವಾಸ ಮಾಡುತ್ತಿದ್ದು, ಇವರ ದಯನೀಯ ಸ್ಥಿತಿಗೆ ಇಬ್ಬರು ಮಕ್ಕಳು ಮಣ್ಣು ತಿಂದು ಅಸುನೀಗಿದ್ದಾರೆ.