ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ (Rajouri) ಜಿಲ್ಲೆಯಲ್ಲಿ ಶುಕ್ರವಾರ ನಡೆದ ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ಐವರು ಯೋಧರು (Soldiers) ಸಾವನ್ನಪ್ಪಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಸೇನೆಯ (Indian Army) ವಾಹನದ ಮೇಲೆ ದಾಳಿ ನಡೆಸಿ ಐವರು ಯೋಧರ ಸಾವಿಗೆ ಕಾರಣರಾಗಿದ್ದ ಉಗ್ರರನ್ನು ಹೊಡೆದುರುಳಿಸಲು ಸೇನೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಉಗ್ರರು ಸ್ಫೋಟಕಗಳನ್ನು ಸಿಡಿಸಿದ್ದಾರೆ. ಪರಿಣಾಮ ಐವರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಯೋಧ ಗಾಯಗೊಂಡಿದ್ದು, ಅವರನ್ನು ಉಧಂಪುರದ (Udhampur) ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಯೋಧರ ವಾಹನದ ಮೇಲೆ ಉಗ್ರರಿಂದ ಗುಂಡಿನ ದಾಳಿ – ಗ್ರೆನೇಡ್ ಬಳಕೆ ಸಾಧ್ಯತೆ
ರಾಜೌರಿ ಜಿಲ್ಲೆಯ ಕಂಡಿ ಪ್ರದೇಶದ ಕೇಸ್ರಿ ಹಿಲ್‍ನ ಗುಹೆಯೊಂದರಲ್ಲಿ ಭಯೋತ್ಪಾದಕರ ತಂಡ ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನೆ ದಾಳಿ ಆರಂಭಿಸಿದೆ. ಮುನ್ನೆಚ್ಚರಿಕೆಯಾಗಿ ಸ್ಥಳಕ್ಕೆ ಹೆಚ್ಚುವರಿ ಸೇನಾ ಪಡೆಗಳನ್ನು ರವಾನಿಸಲಾಗಿದೆ. ಉಗ್ರರ ಪಡೆಯಲ್ಲಿ ಸಾವು ನೋವಿನ ವರದಿಯಾಗಿಲ್ಲ. ಸೇನೆ ಉಗ್ರರ ನೆಲೆಯನ್ನು ಸುತ್ತುವರಿದಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.20 ರಂದು ಪೂಂಚ್ ಜಿಲ್ಲೆಯ ಭಾಟಾ ಧುರಿಯನ್‍ನಲ್ಲಿ ಸೇನಾ ಟ್ರಕ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ಉಗ್ರರು ಸೈನಿಕರ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದರು. ಇದನ್ನೂ ಓದಿ: ಇವಿಎಂ ಖರೀದಿಯಲ್ಲಿ ಅಕ್ರಮ ಆರೋಪ – ಚುನಾವಣಾ ಆಯೋಗದ ವಿರುದ್ಧದ ಪಿಐಎಲ್ ವಜಾಗೊಳಿಸಿದ ಸುಪ್ರೀಂ