ಮಂಡ್ಯ: ಮಗಳನ್ನು ಪ್ರೀತಿಸಿದ ಹಿಂದೂ ಹುಡುಗನನ್ನು ಇಸ್ಲಾಂ ಧರ್ಮದಂತೆ ಮುಂಜಿ ಮಾಡುವ ಮೂಲಕ ಮತಾಂತರಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎನ್ನುವ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ. ಎರಡು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಚಂದನ್ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ಪ್ರತ್ಯಕ್ಷವಾಗಿದ್ದು ನನ್ನನ್ನು ಯಾರು ಅಪಹರಿಸಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಎರಡು ದಿನಗಳ ಹಿಂದೆ ನಮ್ಮ ಮನೆಯಲ್ಲಿ ನನ್ನ ಪ್ರೀತಿಯ ವಿಷಯ ಗೊತ್ತಾಗಿತ್ತು. ಇದ್ರಿಂದ ನನಗೆ ತಂದೆ ತಾಯಿಗಳು ಹೊಡೆಯಲಾರಂಭಿಸಿದರು. ಭಯಗೊಂಡ ನಾನು ಎರಡು ದಿನಗಳಿಂದ ನನ್ನ ಗೆಳೆಯನ ಮನೆಯಲ್ಲಿ ಉಳಿದುಕೊಂಡಿದ್ದೆ. ನಾನು ನಾಲ್ಕು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದು, 21 ವರ್ಷವಾದ ಕೂಡಲೇ ಅವಳನ್ನೇ ಮದುವೆಯಾಗುತ್ತೇನೆ. ಮತಾಂತರಗೊಳ್ಳುವಂತೆ ನನಗೆ ಯಾರು ಬಲವಂತ ಮಾಡಿಲ್ಲ. ಇದೆಲ್ಲ ಸುಳ್ಳು ಎಂದು ಚಂದನ್ ಪಬ್ಲಿಕ್ ಟಿವಿ ಗೆ ಹೇಳಿದ್ದಾರೆ.
ಇತ್ತ ಚಂದನ್ ತಂದೆ ಶ್ರೀನಿವಾಸ್ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ನನ್ನ ಮಗನನ್ನು ಅಪಹರಿಸಿ, ಮುಂಜಿ ಮಾಡಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ನನ್ನ ಮಗನನ್ನು ರಕ್ಷಿಸಿ ಎಂದು ದೂರು ದಾಖಲಿಸಿದ್ದರು. ಅಪ್ರಾಪ್ತ ವಯಸ್ಕನಾದ ನನ್ನ ಮಗನ ಮೈಂಡ್ ವಾಷ್ ಮಾಡಲಾಗಿದೆ ಎಂದು ಶ್ರೀನಿವಾಸ್ ಆರೋಪಿಸಿದ್ದರು.