ಆನೇಕಲ್: ಮಾಜಿ ಎಂಎಲ್‌ಸಿ ದಯಾನಂದ್ ರೆಡ್ಡಿ (Dayanand Reddy) ಕಿಡ್ನಾಪ್ ಪ್ರಕರಣದಲ್ಲಿ ರೋಚಕ ತಿರುವು ಸಿಕ್ಕಿದ್ದು, 2 ಕೋಟಿ ರೂ.ಯ ಕಾರಿನ ಮೇಲಾಗಿದ್ದ ಸ್ಕ್ರಾಚ್‌ನಿಂದ ನಡೆದಿದ್ದ ಗಲಾಟೆಯೇ ಅಪಹರಣಕ್ಕೆ ಕಾರಣ ಎಂದು ತನಿಖೆಯಲ್ಲಿ ಬಯಲಾಗಿದೆ.
ಅಪಹರಣಕ್ಕೂ ಮುನ್ನ ಮಾಜಿ ಎಂಎಲ್‌ಸಿ ದಯಾನಂದ ರೆಡ್ಡಿ ಅವರು ಹೊಸ ಟೊಯೊಟಾ ವೆಲ್‌ಫೇ ಕಾರು ಖರೀದಿಸಿ ಮನೆಗೆ ಹೊರಟಿದ್ದರು. ಈ ವೇಳೆ ನಿವೃತ್ತ ಸೈನಿಕನ ಅಲ್ಟೋ ಕಾರು ಡಿಕ್ಕಿಯಾಗಿ, ಮಾಜಿ ಎಂಎಲ್‌ಸಿ ಕಾರಿಗೆ ಸ್ಕ್ರ್ಯಾಚ್ ಆಗಿತ್ತು. ಸಿಟ್ಟಿಗೆದ್ದ ದಯಾನಂದ ನಿವೃತ್ತ ಸೈನಿಕನಿಗೆ ಕಣ್ಣು ಕಾಣಲ್ವೇನೋ ನಿಂಗೆ, ಗಾಡಿ ಬೆಲೆ 2 ಕೋಟಿ ರೂ. ಅಂತ ಆವಾಜ್ ಹಾಕಿದ್ದರು. ಅಲ್ಲದೇ ಸೈನಿಕನನ್ನು ಅಕ್ರಮವಾಗಿ ಕೂಡಿಟ್ಟು ಹಣ ಕೊಡುವಂತೆ ಒತ್ತಾಯ ಮಾಡಿದ್ದರಂತೆ. ಕೊನೆಗೆ ನಕಲಿ ಚೆಕ್ ಕೊಟ್ಟು ನಿವೃತ್ತ ಸೈನಿಕ ಆಚೆ ಬಂದಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಾಜಿ ಎಂಎಲ್‌ಸಿ ಕಿಡ್ನ್ಯಾಪ್ ಕೇಸ್ – 3 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ ನಾಲ್ವರು ಅರೆಸ್ಟ್
ಈ ನಡುವೆ ಬಿಸಿನೆಸ್‌ನಲ್ಲೂ ಕೂಡ ಲಾಸ್ ಆಗಿದ್ದ ನಿವೃತ್ತ ಸೈನಿಕ ದಯಾನಂದರಿಂದಲೇ ಹಣ ಕೀಳಬೇಕು ಅಂತ ಪ್ಲ್ಯಾನ್ ಮಾಡಿದ್ದಾರೆ. ಬಳಿಕ ಆಟಿಕೆ ಪಿಸ್ತೂಲ್ ಖರೀದಿಸಿ ದಯಾನಂದ್ ಕಿಡ್ನಾಪ್ ಮಾಡಿ, ಬೆದರಿಸಿ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ರು. ಆನಂತರ ಬ್ಯಾಂಕ್ ತೆರೆದ ಬಳಿಕ ಹಣ ನೀಡೋದಾಗಿ ಹೇಳಿ ದಯಾನಂದ ತಪ್ಪಿಸಿಕೊಂಡು ಬಂದಿದ್ದರು.
ಏನಿದು ಪ್ರಕರಣ?
ಮಂಗಳವಾರ ತಡರಾತ್ರಿ 12:15ರ ಸುಮಾರಿಗೆ ಗೋಲ್ಡ್ ಕಾಯಿನ್ ಕ್ಲಬ್‌ನಿಂದ ಹೊರಟಿದ್ದ ಮಾಜಿ ಎಂಎಲ್‌ಸಿ ದಯಾನಂದರೆಡ್ಡಿ ಅವರ ಕಾರನ್ನು ಹಿಲಲಿಗೆ ಗ್ರಾಮದ ಸಮೀಪ ಬೈಕ್‌ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿದ್ದಾರೆ. ನಿಮಗೆ ಗಿಫ್ಟ್ ಬಂದಿದೆ ಎಂದು ಹೇಳಿ ಕಾಟನ್ ಬಾಕ್ಸ್ ತೋರಿಸಿದ್ದಾರೆ. ಕಾರಿನ ಡೋರ್ ಲಾಕ್ ತೆರೆದ ತಕ್ಷಣ ಓರ್ವ ವ್ಯಕ್ತಿ ಕಾರಿನೊಳಗೆ ನುಗ್ಗಿದ್ದಾನೆ. ಬಳಿಕ ಗನ್ ತೋರಿಸಿ ತಾನು ಹೇಳಿದ ಕಡೆಗೆ ಕಾರು ಚಲಾಯಿಸುವಂತೆ ಸೂಚಿಸಿದ್ದಾನೆ.
ಈ ವೇಳೆ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಹಿಂಬಾಲಿಸಿದ್ದಾರೆ. ಬಳಿಕ ಅತ್ತಿಬೆಲೆ ಕೆಹೆಚ್‌ಬಿ ಬಡಾವಣೆ ಸಮೀಪ ಕರೆದೊಯ್ದು ಬೆದರಿಕೆ ಹಾಕಲಾಗಿದೆ. ನಿನ್ನನ್ನು ಕೊಲ್ಲಲು 10 ಕೋಟಿ ರೂ. ಸುಪಾರಿ ನೀಡಿದ್ದಾರೆ ಎಂದು ಹೇಳಿ ಕುತ್ತಿಗೆಗೆ ಗನ್ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ.
ಈ ವೇಳೆ ಹಣ ನಾನೇ ಕೊಡುತ್ತೇನೆ, ಕೊಲ್ಲಬೇಡಿ ಎಂದು ದಯಾನಂದ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ. ಮೊದಲು 3 ಕೋಟಿ ರೂ. ಬೇಡಿಕೆ ಇಟ್ಟಿದ್ದ ಅಪಹರಣಕಾರರು, ಬಳಿಕ 2 ಕೋಟಿ ರೂ.ಗೆ ಒಪ್ಪಿಕೊಂಡಿದ್ದಾರೆ. ಸದ್ಯ ಹಣ ಇಲ್ಲ, ಬೆಳಗ್ಗೆ ಬ್ಯಾಂಕ್ ತೆರೆದ ಬಳಿಕ ಹಣ ನೀಡುವುದಾಗಿ ದಯಾನಂದರೆಡ್ಡಿ ಮನವಿ ಮಾಡಿದ್ದಾರೆ. ಹಣ ಡ್ರಾ ಮಾಡಿದ ಬಳಿಕ ಕರೆ ಮಾಡುವಂತೆ ಸೂಚಿಸಿ ಆರೋಪಿಗಳು ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ದಯಾನಂದರೆಡ್ಡಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಸೂರ್ಯ ನಗರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಆಗಿದ್ದು, ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
