ಮಂಗಳೂರು: ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮೊದಲ ಹಂತದ ಮತದಾನದಲ್ಲಿ ಜನ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಾಹ್ನದ 3 ಗಂಟೆ ವೇಳೆಗೆ ರಾಜ್ಯದಲ್ಲಿ ಒಟ್ಟು 50.93% ರಷ್ಟು ಮತದಾನ ನಡೆದಿದೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ (Naxal Affected Area) ಬಿರುಸಿನ ಮತದಾನ ನಡೆಯುತ್ತಿದೆ. ನಕ್ಸಲ್ ಪೀಡಿತ ಪ್ರದೇಶಗಳಾಗಿ ಗುರುತಿಸಿದ್ದ 18 ಪ್ರದೇಶಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಆರ್‌ಪಿಎಸ್‌ಎಫ್ ಯೋಧರು ಹಾಗೂ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದಿಂದ ನಿಯೋಜಿಸಲ್ಪಟ್ಟ ಸಿಎಪಿಎಫ್ ಫೋರ್ಸ್ (CAPF Force) ಭದ್ರತಾ ಪಡೆಗಳ ಕಣ್ಗಾವಲಿನಲ್ಲಿ ಮತದಾನ ನಡೆಯುತ್ತಿದೆ. ಕೆಲವೆಡೆ ಜನ ಆತಂಕದಲ್ಲೇ ಮತದಾನ ಮಾಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ನಡುವೆ ಜನರ ಸುರಕ್ಷತೆ ಬಗ್ಗೆಯೂ ನಿಗಾ ವಹಿಸಿರುವ ನಕ್ಸಲ್ ನಿಗ್ರಹ ಪಡೆಗಳು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ಉಸಿರಾಟದ ಸಮಸ್ಯೆ; ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಬಂದು ಮತದಾರರಿಂದ ವೋಟ್
ಎಲ್ಲಿ- ಎಷ್ಟು ಮತದಾನ?
ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ 50.93% ಮತದಾನ ನಡೆದಿದೆ. ಬೆಂಗಳೂರಿನ 4 ಕ್ಷೇತ್ರ ಹೊರತು ಪಡಿಸಿದ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಮತದಾನ 50% ಗಡಿ ದಾಟಿದೆ.
ಬೆಂಗಳೂರು ಗ್ರಾಮೀಣ 49.62%, ಬೆಂಗಳೂರು ಉತ್ತರ 41.12%, ಬೆಂಗಳೂರು ಕೇಂದ್ರ 40.10%, ಬೆಂಗಳೂರು ದಕ್ಷಿಣ 40.77% ಮತದಾನ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ 58.76%, ಉಡುಪಿ- ಚಿಕ್ಕಮಗಳೂರು 57.49% ಮತದಾನ ನಡೆದಿದೆ. ಆರಂಭದಿಂದಲೂ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭರ್ಜರಿ ಮತದಾನ ನಡೆಯುತ್ತಿದೆ. ಮಧ್ಯಾಹ್ನವಾದ ಕಾರಣ ಮತಗಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದು, ಸಂಜೆ ಮತದಾನ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ 50.93% ವೋಟಿಂಗ್ – ಎಂದಿನಂತೆ ಬೆಂಗಳೂರಿನಲ್ಲಿ ಕಡಿಮೆ ಮತದಾನ