ಕರೀಂನಗರ: ಶಾಸಕರಿಗಾಗಿ ಕಚೇರಿ ಎದುರು ಸುಮಾರು 5 ಗಂಟೆಗಳ ಕಾಲ ಕಾದು ಬಳಿಕ ಇಬ್ಬರು ರೈತರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್‍ನಿಂದ ಸುಮಾರು 160 ಕಿ.ಮೀ ದೂರದಲ್ಲಿರುವ ಕರೀಂನಗರದ ರೈತರಾದ ಎಂ ಶ್ರೀನಿವಾಸ್(25) ಹಾಗೂ ಪರಶುರಾಮುಲು(23) ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಶಾಸಕರಾದ ರಸಮಾಯಿ ಬಾಲಕಿಶನ್ ಅವರ ಕಚೇರಿ ಎದುರು ಬೆಂಕಿ ಹಚ್ಚಿಕೊಂಡು ಗಂಭಿರವಾಗಿ ಗಾಯಗೊಂಡಿದ್ದಾರೆ. ಸದ್ಯ ಇಬ್ಬರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಶ್ರೀನಿವಾಸ್ ಹಾಗೂ ಪರಶುರಾಮುಲು ಇಬ್ಬರೂ ದಲಿತ ರೈತರಿಗಾಗಿ ಇರುವ ಯೋಜನೆಯಡಿ ಭೂಮಿ ಪಡೆಯಲು ತಮ್ಮ ಗ್ರಾಮದ ಕಂದಾಯ ಕಚೇರಿಗೆ ಹೋಗಿದ್ದರು. ಆದ್ರೆ ಅಲ್ಲಿನ ಅಧಿಕಾರಿ 20 ಸಾವಿರ ರೂ. ಲಂಚಕ್ಕಾಗಿ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ.
Advertisement
ಈ ಹಿನ್ನೆಲೆಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ತಮ್ಮ ಸ್ಥಳೀಯ ಶಾಸಕರಿಗೆ ದೂರು ನೀಡಲು ಭಾನುವಾರದಂದು ಗ್ರಾಮಸ್ಥರೊಂದಿಗೆ ಶಾಸಕರ ಕಚೇರಿಗೆ ಹೋಗಿದ್ದರು. ಕಚೇರಿ ಎದುರು ಸುಮಾರು 5 ಗಂಟೆ ಕಾದ ನಂತರವೂ ಶಾಸಕರು ಭೇಟಿಯಾಗಲು ಸಾಧ್ಯವಿಲ್ಲ ಎಂದಿದ್ದರು. ಇದರಿಂದ ಆಕ್ರೋಶಗೊಂಡ ಶ್ರೀನಿವಾಸ್ ಹಾಗೂ ಪರಶುರಾಮುಲು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
Advertisement
ನಾವು ಬೆಳಗ್ಗೆ 10 ಗಂಟೆಯಿಂದ 3.30ರ ವರೆಗೆ ಕಾದೆವು. ಆದ್ರೆ ನಮ್ಮನ್ನು ಶಾಸಕರು ಭೇಟಿಯಾಗದೆ ಅಲ್ಲಿಂದ ತೆರಳುವಂತೆ ನಮಗೆ ಹೇಳಿದ್ರು ಅಂತ ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ರಾಜ್ಯ ಹಣಕಾಸು ಸಚಿವ ಇಟೆಲಾ ರಾಜೇಂದರ್, ಈ ಬಗ್ಗೆ ತನಿಖೆ ನಡೆಯಲಿದೆ. ಕಂದಾಯ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಸಾಬೀತಾದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.