-16 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ
ತುಮಕೂರು: ಕಂದಾಯ ಅಧಿಕಾರಿಗಳು, ಸರ್ವೆ ಅಧಿಕಾರಿಗಳು ಸೇರಿಕೊಂಡು ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟ ಪ್ರಕರಣ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.
ಬರೋಬ್ಬರಿ 78 ಎಕರೆ ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. 16 ವರ್ಷಗಳ ಬಳಿಕ ಅಧಿಕಾರಿ ಕಳ್ಳಾಟ ಬಯಲಾಗಿದ್ದು, ಕಬಳಿಸಿದ ಜಾಗದಲ್ಲಿ ಸದ್ಯ ಪ್ರತಿಷ್ಠಿತ ರಿಲಯನ್ಸ್ ಕಂಪನಿಯ ಗೋಡಾನ್ ನಿರ್ಮಾಣವಾಗಿದೆ.
Advertisement
Advertisement
ತಾಲೂಕಿನ ನಂದಿಹಳ್ಳಿ ಗ್ರಾಮದ ಸರ್ವೆ ನಂಬರ್ 42 ರಲ್ಲಿನ ಸುಮಾರು 78 ಎಕರೆ ಅರಣ್ಯ ಭೂಮಿ ಖಾಸಗಿ ಕಂಪನಿಗೆ ಅಧಿಕಾರಿಗಳು ಖಾತೆ ಮಾಡಿಕೊಡಲಾಗಿದೆ. ನಂದಿಹಳ್ಳಿಯ 42ನೇ ಸರ್ವೆ ನಂಬರಲ್ಲಿನ 73 ಹೆಕ್ಟೆರ್ ಜಾಗ ಅಂದರೆ ಸರಿಸುಮಾರು 181 ಎಕರೆ ಸರ್ಕಾರಿ ಖರಾಬು ಜಮೀನನ್ನು 1994ರಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಅರಣ್ಯ ಇಲಾಖೆಗೆ ಸೇರಿದ್ದ ಭೂಮಿಯನ್ನು ಕಂದಾಯ ಅಧಿಕಾರಿಗಳು, ಸರ್ವೆ ಅಧಿಕಾರಿಗಳು ಸೇರಿಕೊಂಡು ಹಿಮಾದ್ರಿ ಎಂಟರ್ ಪ್ರೈಸಸ್ ಎಂಬ ಕಂಪನಿಗೆ 78 ಎಕರೆಯನ್ನು ಪರಭಾರೆ ಮಾಡಿದ್ದಾರೆ. ಈ 78 ಎಕರೆ ಜಾಗವನ್ನು ಮೊದಲು ಸುಮಾರು 13 ನಕಲಿ ರೈತರ ಹೆಸರಿಗೆ ಹರಿದು ಹಂಚಿ ಖಾತೆ ಮಾಡುತ್ತಾರೆ. ಬಳಿಕ ಆ ನಕಲಿ ರೈತರಿಂದ ಹಿಮಾದ್ರಿ ಕಂಪನಿಗೆ ಮಾರಿದಂತೆ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿಯನ್ನು ಪಡೆದಿದ್ದಾರೆ.
Advertisement
Advertisement
ವಿಪರ್ಯಾಸ ಎಂದರೇ 2004ರಲ್ಲಿ ಅರಣ್ಯ ಇಲಾಖೆಯ 78 ಎಕರೆ ಜಾಗ ಹಿಮಾದ್ರಿ ಕಂಪನಿಗೆ ಪರಭಾರೆಯಾಗಿದ್ದು, ಆ ಬಳಿಕ ಈ ಪ್ರದೇಶವನ್ನು 2011ರಲ್ಲಿ ಹಿಮಾದ್ರಿ ಕಂಪನಿ, ರಿಲಯನ್ಸ್ ಕಂಪನಿಗೆ ಮಾರಾಟ ಮಾಡುತ್ತದೆ. ಹೀಗೆ ಕಬಳಿಸಿದ ಅರಣ್ಯ ಭೂಮಿಯಲ್ಲಿ ರಿಲಯನ್ಸ್ ಕಂಪನಿಯ ಗೋಡಾನ್ ನಿರ್ಮಾಣ ಮಾಡಿದೆ. ಸುಮಾರು 16 ವರ್ಷಗಳ ನಂತರ ಸಾಮಾಜಿಕ ಕಾರ್ಯಕರ್ತ ಜಿ.ಎಸ್.ಬಸವರಾಜ್ ಈ ಪ್ರಕರಣವನ್ನು ಬಯಲಿಗೆ ಎಳೆದಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಮಾರಾಟ ಮಾಡಿದ್ದ ಅಂದಿನ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಸ್ವತಃ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಮ್ಮ ಭೂಮಿ ಕಬಳಿಕೆ ಆಗಿರುವ ವಿಚಾರ ಗೊತ್ತಿಲ್ಲ. ಹಾಗಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಈ ಪ್ರಕರಣ ಕೇವಲ ಒಂದು ಉದಾಹರಣೆ ಅಷ್ಟೇಯಾಗಿದ್ದು ಹೀಗೆ ಜಿಲ್ಲೆಯಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿ ಕಬಳಿಸಿದ ಪ್ರಕರಣ ಇದೆ. ಸರ್ಕಾರಿ ಭೂಮಿಯನ್ನು ಕಾಪಾಡಬೇಕಿದ್ದ ಅಧಿಕಾರಿಗಳು ಮಾತ್ರ ತಿಂಗಳ ಸಂಬಳ ಪಡೆದು ಮೌನವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.