ತುಮಕೂರು: ರೈತರ ತೀವ್ರ ವಿರೋಧದ ನಡುವೆಯೂ ಬೀದರ್-ಶ್ರೀರಂಗಪಟ್ಟಣ 150 ಎ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಪೊಲೀಸರ ಸರ್ಪಗಾವಲಿನಲ್ಲಿ ನ್ಯಾಷನಲ್ ಹೈವೇ ಪ್ರಾಧಿಕಾರದಿಂದ ಸರ್ವೆ ಕಾರ್ಯ ಆರಂಭಿಸಿದೆ. ಇದು ಮತ್ತೊಮ್ಮೆ ರೈತರ ಹೋರಾಟಕ್ಕೆ ಮುನ್ನುಡಿಯಾಗಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಪೋಚಕಟ್ಟೆ ಬಳಿ ಬೈಪಾಸ್ ರಸ್ತೆ ಆರಂಭಿಸಿ ಅಪ್ಪಾಸಾಬಿ ಅಣೆಯ ಬಳಿ ಸೇತುವೆ ನಿರ್ಮಿಸಿ ಅಲ್ಲಿಂದ ಎಸ್‍ಎಲ್‍ಆರ್ ಬಂಕ್ ಸರ್ಕಲ್, ಹುಳಿಯಾರು ಅಮಾನಿಕೆರೆ, ಸೋಮಜ್ಜನ ಪಾಳ್ಯ, ಕೆ.ಸಿ.ಪಾಳ್ಯ, ಲಿಂಗಪ್ಪನ ಪಾಳ್ಯದ ಮೂಲಕ ಕೆಂಕೆರೆ ಇಂಡಿಯನ್ ಗ್ಯಾಸ್ ಏಜೆನ್ಸಿ ಬಳಿ ಸೇರುವುದು ಬೈಪಾಸ್ ರಸ್ತೆಯ ನೀಲ ನಕ್ಷೆ ಸಿದ್ಧವಾಗಿದೆ.
Advertisement
Advertisement
ನಕ್ಷೆಯಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವರ್ತುಲ ರಸ್ತೆ ನಿರ್ಮಾಣದ ಸರ್ವೆ ಕಾರ್ಯಕ್ಕೆ ಮುಂದಾಗಿದ್ದಾರೆ. ರಸ್ತೆ ನಿರ್ಮಾಣದಿಂದ ಶವಸಂಸ್ಕರಕ್ಕೂ ಭೂಮಿಯಿಲ್ಲದೆ ಪರದಾಡುವ ಸ್ಥಿತಿ ಎದುರಾಗಲಿದೆ. ಇದರ ಬದಲು ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಯನ್ನೇ ಅಗಲೀಕರಣ ಮಾಡಿದರೆ ರೈತರ ಭೂಮಿ ಉಳಿಯುತ್ತೆ ಅನ್ನೋದು ರೈತರ ಆಗ್ರಹವಾಗಿದೆ.
Advertisement
ಕಳೆದ ಆಗಷ್ಟ್ ತಿಂಗಳಲ್ಲಿ ಬೈಪಾಸ್ ಸರ್ವೆಗೆ ಬಂದಿದ್ದ ಸಿಬ್ಬಂದಿಯನ್ನ ರೈತರು ಆಕ್ಷೇಪ ವ್ಯಕ್ತಪಡಿಸಿ ವಾಪಸ್ ಕಳುಹಿಸಿದ್ದರು. ಪರಿಣಾಮ ಮುನ್ನೆಚ್ಚರಿಕೆಯಾಗಿ ಪೊಲೀಸ್ ಸರ್ಪಗಾವಲಿನಲ್ಲಿ ಸರ್ವೆ ಕಾರ್ಯ ಪುನರ್ ಆರಂಭಿಸಲಾಯಿತು. ಮೊದಲ ದಿನ ಪೋಚಕಟ್ಟೆಯಿಂದ ಎಸ್‍ಎಲ್‍ಆರ್ ಬಂಕ್ ಸರ್ಕಲ್ ಬಳಿಯವರೆಗೆ ಸರ್ವೆ ಕಾರ್ಯ ಮಾಡಲಾಗಿದೆ. ಈ ಹಿಂದೆ ಅಳತೆ ಮಾಡಿ ನೆಟ್ಟಿದ್ದ ಕಲ್ಲಗಳನ್ನ ಕಿತ್ತು ಹಾಕಿದ ಪರಿಣಾಮ ಸರ್ವೆ ಕಾರ್ಯಕ್ಕೆ ಹೆಚ್ಚಿನ ಸಮಯ ಅವಶ್ಯಕತೆ ಇದೆ.