– ನಮ್ಮ ಸಿಬ್ಬಂದಿ ಮರ ಕಡಿದಿದ್ದು ತಪ್ಪು
ತುಮಕೂರು: ರೈತ ಮಹಿಳೆಯ ಮರ ಕಡಿಯಲು ನಾನು ಅನುಮತಿ ನೀಡಿಲ್ಲ. ಆದರೂ ನಮ್ಮ ಸಿಬ್ಬಂದಿ ಮರ ಕಡಿದು ತಪ್ಪು ಮಾಡಿದ್ದಾರೆ ಎಂದು ಗುಬ್ಬಿ ತಾಲೂಕಿನ ತಹಶೀಲ್ದಾರ್ ಮಮತಾ ಹೇಳಿದ್ದಾರೆ.
ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಅವರಿಗೆ ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು. ಆದರೆ ಜಾತ್ರೆಗೆ ಜಾಗ ಬೇಕು ಎಂದು ಈ ಜಮೀನಿನಲ್ಲಿ ಬೆಳದಿದ್ದ ಅಡಕೆ, ತೆಂಗು ಮತ್ತು ಬಾಳೆಯನ್ನು ಕಡಿದು ಹಾಕಲಾಗಿತ್ತು. ಇದನ್ನು ಮಮತಾ ಅವರ ಆದೇಶ ಮೇರೆಗೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈಗ ಈ ಆರೋಪವನ್ನು ತಳ್ಳಿ ಹಾಕಿರುವ ಮಮತಾ, ನಾನು ರೈತ ಮಹಿಳೆ ಸಿದ್ದಮ್ಮರ ಮರ ಕಡಿಯಲು ಅನುಮತಿ ನೀಡಿರಲಿಲ್ಲ. ಆದರೂ ನಮ್ಮ ಸಿಬ್ಬಂದಿ ಮರ ಕಡಿದು ತಪ್ಪು ಮಾಡಿದ್ದಾರೆ. ಗ್ರಾಮ ಲೆಕ್ಕಿಗ ಮುರುಳಿ ಸೇರಿದಂತೆ ಇತರ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಪ್ಪಿಗೆ ಕೊಟ್ಟ ಅರ್ಚಕರ ಮರವನ್ನು ಮಾತ್ರ ತೆರುಗೊಳಿಸಲು ಆದೇಶಿಸಲಾಗಿತ್ತು. ಆದರೆ ನಮ್ಮ ಸಿಬ್ಬಂದಿ ಅಲ್ಲಿಗೆ ಹೋದಾಗ ಅನುಮತಿ ಇಲ್ಲದಿದ್ದರು ಈ ಕೆಲಸ ಮಾಡಿದ್ದಾರೆ ಎಂದು ಮಮತಾ ಅವರು ತಿಳಿಸಿದ್ದಾರೆ.
ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗುವುದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶೀಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿತ್ತು. ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಿ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 300 ಅಡಿಕೆ, 30 ತೆಂಗು ಮತ್ತು ಬಾಳೆ ಗಿಡಗಳನ್ನು ಉರುಳಿಸಿದ್ದರು. ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿದ್ದಾರೆ. ಹೀಗಾಗಿ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಜಮೀನು ಕೊಡುಗೆಯಾಗಿ ಕೊಟ್ಟಿದ್ದರು. ಅಲ್ಲದೆ ಜಮೀನು ಪೂರ್ಣ ಸ್ವಾಧೀನ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಮುನಿ ಕೆಂಪಯ್ಯ ಕುಟುಂಬ ಅರ್ಜಿ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಗಿಡಗಳನ್ನು ನಾಶ ಮಾಡಿದ್ದಾರೆ.
ಈ ನಡುವೆ ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮರ ಮಧ್ಯೆಯೇ ಜಮೀನು ಹಂಚಿಕೆಯಲ್ಲಿ ವಿವಾದ ಉಂಟಾಗಿತ್ತು. ಇದರ ಲಾಭ ಪಡೆದುಕೊಂಡ ತಾಲೂಕು ಆಡಳಿತ ಏಕಾಏಕಿ ತೋಟವನ್ನು ಉರುಳಿಸಿದೆ. ಗುಬ್ಬಿ ಪೊಲೀಸರ ಸಮುಖದಲ್ಲೇ ಗ್ರಾಮ ಲೆಕ್ಕಿಗ ಮುರುಳಿ ಮರಗಳನ್ನು ಕಡಿದಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕುಟುಂಬ ದುಃಖದ ಮಡುವಿನಲ್ಲಿದೆ.