ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ 11 ಗುತ್ತಿಗೆದಾರರಿಗೆ ಒಟ್ಟು 1.53 ಕೋಟಿ ರೂ. ದಂಡ ವಿಧಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣವಾಗಬೇಕೆಂಬ ಸೂಚನೆ ಇದ್ದರೂ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಕಾಮಗಾರಿಗಳ ಪ್ರಗತಿಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಕಾಮಗಾರಿ ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೂಬಾಲನ್ ತಿಳಿಸಿದ್ದಾರೆ.
Advertisement
Advertisement
ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆದೇಶಿಸಲಾಗಿತ್ತು. ಆದರೂ ನಿರ್ಲಕ್ಷ್ಯ ತೋರಿದ್ದಾರೆ. ಆದೇಶ ಉಲ್ಲಂಘಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಇದೀಗ ಕಾಮಗಾರಿ ವಿಳಂಬ ಮತ್ತು ಸುರಕ್ಷಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆ ಗುತ್ತಿಗೆದಾರರಿಗೆ 69 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದರು.
Advertisement
ಒಳ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದ ಆರ್‍ಎಂಎನ್ ನಿರ್ಮಾಣ ಸಂಸ್ಥೆಗೆ 50.41 ಲಕ್ಷ ರೂ., ಅಶೋಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದ ಸಿದ್ಧಾರ್ಥ್ ಸಿವಿಲ್ ವರ್ಕ್ ಸಂಸ್ಥೆಗೆ 26.97 ಲಕ್ಷ ರೂ., ಅಮಾನಿಕೆರೆ ರಕ್ಷಣೆ ಮತ್ತು ಅಭಿವೃದ್ಧಿ ಸರಿಯಾಗಿ ನಿರ್ವಹಿಸದ ಆರ್‍ಎನ್‍ಎನ್ ಸಂಸ್ಥೆಗೆ 23.42 ಲಕ್ಷ ರೂ. ದಂಡ ವಿಧಿಸಲಾಗಿದೆ.
Advertisement
ಅಲ್ಲದೆ ಡಾ.ರಾಧಾಕೃಷ್ಣ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡುತಿದ್ದ ಶ್ರೀನಿವಾಸ್ ನಿರ್ಮಾಣ ಸಂಸ್ಥೆ, ಭಗವಾನ್ ಮಹಾವೀರ ರಸ್ತೆ ಅಭಿವೃದ್ಧಿ ಸುಧಾಕರ್ ಪೆರಿಟಾಲ, ಮಹಿಳಾ ಥೀಮ್ ಪಾರ್ಕ್ ರಾಜೇಗೌಡ, ಟ್ರಾಮಾ ಸೆಂಟರ್ ಕೆಪಿಆರ್ ಸಂಸ್ಥೆ ಸೇರಿದಂತೆ ಒಟ್ಟು 11 ಸಂಸ್ಥೆಗಳಿಗೆ ದಂಡ ಹಾಕಲಾಗಿದೆ. ಈ ಮೂಲಕ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲಾಗಿದೆ.