ತುಮಕೂರು: ಪತಿ ಸತ್ತರೂ ಹಠದಿಂದ ಬದುಕು ನಡೆಸುತ್ತಿದ್ದ ಮಹಿಳೆಯೋರ್ವಳು ತನ್ನ ಅತ್ತೆಯ ಕಾಟಕ್ಕೆ ಆತ್ಮಹತ್ಯೆ ಶರಣಾದ ಘಟನೆ ಕೊರಟಗೆರೆ ತಾಲೂಕಿನ ಬೊಮ್ಮಲದೇವಿಪುರದಲ್ಲಿ ನಡೆದಿದೆ.
ಬೊಮ್ಮಲದೇವಿಪುರದ ಪುಷ್ಪಾ (35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪುಷ್ಪಾ ಬೊಮ್ಮಲದೇವಿಪುರದ ನರಸಿಂಹಮೂರ್ತಿ ಜೊತೆಗೆ 8 ವರ್ಷಗಳ ಹಿಂದೆ ಮದುವೆಯಾಗಿದ್ದಳು. ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದ ಇಬ್ಬರೂ ಸಂತೋಷವಾಗಿ ಬದುಕು ನಡೆಸುತ್ತಿದ್ದರು. ಆದರೆ ಪುಷ್ಪಾಳ ಹಣೆಬರಹಕ್ಕೆ ಪತಿ ನರಸಿಂಹಮೂರ್ತಿ ಅನಾರೋಗ್ಯದಿಂದ ಬಳಲಿ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದಾನೆ.
Advertisement
Advertisement
ಪತಿ ನರಸಿಂಹಮೂರ್ತಿ ಸತ್ತ ದಿನದಿಂದಲೂ ಪುಷ್ಪಾ ಬದುಕು ದುಸ್ಥರವಾಗಿ ಹೋಗಿದೆ. ಎರಡು ಮಕ್ಕಳನ್ನೂ ಸಾಕಿ ತಾನೇ ದುಡಿದು ಬದುಕು ಸಾಗಿಸುತ್ತಿದ್ದ ಪುಷ್ಪಾಳಿಗೆ ತನ್ನ ಅತ್ತೆಯೇ ಯಮನಾಗಿ ಕಾಡಿದ್ದಾಳೆ.
Advertisement
ಪುಷ್ಪಾ ಗಂಡ ಸತ್ತ ಬಳಿಕ ಅಂಗನವಾಡಿಯಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನೂ ಸಾಕಿಕೊಂಡು ಬದುಕು ನಡೆಸುತ್ತಿದ್ದಳು. ಜೊತೆಗೆ ಸರ್ಕಾರದಿಂದ ಮನೆಯನ್ನೂ ಮಂಜೂರು ಮಾಡಿಸಿಕೊಂಡು ಸಾಕಿ ಸಲಹುತ್ತಿದ್ದಳು. ಆದರೆ ಪುಷ್ಪಾಳ ಅತ್ತೆ ಕಾಮಲಕ್ಷ್ಮಮ್ಮ ನೀಡುತ್ತಿದ್ದ ಕಾಟಕ್ಕೆ ಪುಷ್ಪಾ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Advertisement
ಮಗನ ಸಾವಿನ ಬಳಿಕ ಸೊಸೆ ಪುಷ್ಪಾಳಿಗೆ ಇನ್ನಿಲ್ಲದ ಕಾಟ ನೀಡುತ್ತಿದ್ದ ಕಾಮಲಕ್ಷ್ಮಮ್ಮ, ಮನೆ ಬಿಟ್ಟು ಹೋಗುವಂತೆ ಅನೇಕ ಬಾರಿ ಜಗಳ ಮಾಡಿದ್ದಳಂತೆ. ನಿತ್ಯವೂ ತನ್ನ ಹೆಣ್ಣುಮಕ್ಕಳೊಂದಿಗೆ ಸೇರಿ ಪುಷ್ಪಾಳನ್ನು ಥಳಿಸಿ, ಮನೆ ಬಿಟ್ಟುಹೋಗುವಂತೆ ಕಾಟ ನೀಡುತ್ತಿದ್ದಳಂತೆ. ಊರಿನ ಹಿರಿಯರು ಸೇರಿ ಅನೇಕ ಬಾರಿ ಜಗಳ ಬಗೆಹರಿಸಿ ಬುದ್ಧಿ ಹೇಳಿದ್ದರಂತೆ. ಕೊನೆಗೆ ಎಲ್ಲಾ ಭರವಸೆ ಕಳೆದುಕೊಂಡ ಪುಷ್ಪಾ, ತನ್ನ ಸಾವಿಗೆ ಅತ್ತೆ ಹಾಗೂ ನಾದಿನಿಯರ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅತ್ತೆ ಕಾಮಲಕ್ಷ್ಮಮ್ಮ ಹಾಗೂ ನಾದಿನಿಯರೇ ಸೇರಿ ಈಕೆಯನ್ನ ಕೊಲೆಮಾಡಿದ್ದಾರೆ ಅಂತ ಪುಷ್ಪಾಳ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.