ಕಳೆದ ಕೆಲವು ದಿನಗಳಿಂದ ತುಕಾಲಿ ಸಂತೋಷ್ (Tukali Santu) ಗಂಭೀರವಾಗಿಬಿಟ್ಟಿದ್ದರು. ಮೊದಲ ವಾರದಲ್ಲಿ ಅವರು ಮಾಡಿದ ಕಾಮಿಡಿಯ ಕ್ವಾಲಿಟಿ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ತರಾಟೆಗೆ ತೆಗೆದುಕೊಂಡಿದ್ದರು. ‘ನಿಮ್ಮ ಕಾಮಿಡಿ ಬೇರೆಯವರ ಮನಸ್ಸನ್ನು ನೋಯಿಸುತ್ತದೆ’ ಎಂಬ ಮಾತು ಪದೇ ಪದೇ ಮನೆಮಂದಿಯ ಬಾಯಲ್ಲಿ ಬರುತ್ತಿತ್ತು. ಇದರಿಂದ ಹಾಸ್ಯ ಮಾಡಲೇ ಹಿಂಜರಿಯುತ್ತಿದ್ದ ತುಕಾಲಿ ಅವರು ಗಂಭೀರವಾಗಿಬಿಟ್ಟಿದ್ದರು. ಮನೆಯೊಳಗಿನ ಸನ್ನಿವೇಶಗಳು, ಟಾಸ್ಕ್‌ಗಳು ಮತ್ತು ಜಗಳಗಳೂ ಅವರು ಗಂಭೀರವಾಗಲು ಕಾರಣವಿರಬಹುದು.
ಆದರೆ ಈವತ್ತು ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಮತ್ತೆ ನಗೆಯ ಹೊನಲು ಹರಡಿದೆ. ಆ ನಗೆಯ ಅಲೆಯಲ್ಲಿ ಮನೆಯ ಸದಸ್ಯರು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ನಕ್ಕು ನಲಿದಿದ್ದಾರೆ. ಆ ನಗುವಿಗೆ ಕಾರಣವಾದವರು ತುಕಾಲಿ ಸಂತೋಷ್. ಈವತ್ತಿನ ಎಪಿಸೋಡ್ ಸಖತ್ ಎಂಟರ್‍ಟೈನಿಂಗ್ ಆಗಿರುತ್ತದೆ ಎಂಬುದರ ಸೂಚನೆ JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿಯೇ ಸಿಕ್ಕಿದೆ.
‘ಬಾರೇ ರಾಜಕುಮಾರಿ’ ಎಂದು ಕಾರ್ತಿಕ್ ಅವರು ತುಕಾಲಿ ಸಂತೋಷ್ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದಾಗ ಇಡೀ ಮನೆಯೇ ದಂಗಾಬಿಟ್ಟಿತ್ತು. ಯಾಕೆಂದರೆ ತುಕಾಲಿ ಅವರ ವೇಷ ಬದಲಾಗಿತ್ತು. ಅವರು ‘ಚೂಡಿದಾರ ತೊಟ್ಟ ಮರಿಜಿಂಕೆ’ಯಾಗಿ ಬದಲಾಗಿದ್ದರು.
ಬಂದವರು ವರ್ತೂರ್ ಸಂತೋಷ್ ಅವರ ಹೆಗಲಿಗೆ ಕೈ ಹಾಕಿ ನುಲಿಯುತ್ತ, ‘ವರ್ತೂ… ಯಾಕೆ ನನ್ನನ್ನ ಬಿಟ್ಬಟ್ಟು ಒಬ್ನೇ ಟೊಮೆಟೊ ಮಾರೋಕೆ ಹೋಗಿದ್ದೆ’ ಎಂದು ಕೇಳಿದಾಗಲಂತೂ ಮನೆಯವರೆಲ್ಲರೂ ಬಿದ್ದು ಬಿದ್ದು ನಗುವಂತಾಯ್ತು.
‘ಇನ್ನೊಂದ್ ವಿಷ್ಯ ಗೊತ್ತಾ? ಯಾವಾಗ ನನ್ನ ತಂಗಿ ಸಿಕ್ರೂ ನಾನು ಜೋರಾಗಿ ತಬ್ಕೋತೀನಿ’ ಎಂದು ನಮ್ರತಾ (Namrata) ಕಡೆಗೆ ಹೋದರೆ, ನಮ್ರತಾಕಿರುಚುತ್ತ ಓಡಿಹೋಗಿಬಿಟ್ಟರು. ಅಷ್ಟೇ ಅಲ್ಲ, ಈ ‘ಹೊಸ ಹುಡುಗಿ’ಯಿಂದ ‘ಪಪ್ಪಿ’ ತೆಗೆದುಕೊಳ್ಳಲು ಪೈಪೋಟಿಯೇ ನಡೆದಿದೆ.