ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೆ ಬ್ರೇಕಿಂಗ್ ನ್ಯೂಸ್ ಲಭ್ಯವಾಗುತ್ತಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಮಂಗಳವಾರವೇ ಕೊನೆಯ ದಿನ ಎನ್ನುವ ವಿಚಾರ ರಾಜಕೀಯದಲ್ಲಿಗ ಚರ್ಚೆಯಾಗುತ್ತಿದೆ.
ಕಳೆದ ಮೂರು ದಿನಗಳಿಂದಲೇ ಈ ಸುದ್ದಿ ಹರಿದಾಡುತ್ತಿದ್ದು, ಈ ವಿಚಾರಕ್ಕೆ ಪುಷ್ಠಿ ಎನ್ನುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ತುರ್ತು ಸಭೆಯನ್ನು ಕರೆದಿದ್ದು, ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಿದ್ದಾರೆ.
ಮಂಗಳವಾರ ಕೇಂದ್ರ ಗೃಹ ಸಚಿವ ಹಾಗೂ ಹಿರಿಯ ಮುಖಂಡ ರಾಜನಾಥ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ. ನಾಳೆ ಪಕ್ಷದ ಮುಖಂಡರುಗಳೊಂದಿಗೆ ಪ್ರಸಕ್ತ ರಾಜ್ಯರಾಜಕಾರಣದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ನಾಳೆ, ನಾಡಿದ್ದರ ಒಳಗಡೆ ಸರ್ಕಾರ ಬಿದ್ದು ಹೋಗುತ್ತೆ: ಶೆಟ್ಟರ್ ಭವಿಷ್ಯ
ಇದಲ್ಲದೇ ಕಾಂಗ್ರೆಸ್ಸಿನ ಅಸಮಾಧಾನಗೊಂಡಿರುವ ಸಚಿವ ರಮೇಶ್ ಜಾರಕಿಹೊಳಿ ಶಾಸಕರಾದ ಎಂಟಿಬಿ ನಾಗರಾಜ್ ಹಾಗೂ ಭೀಮಾನಾಯ್ಕ್ ರವರು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಚರ್ಚೆಯ ವೇಳೆ ತೆಗೆದುಕೊಳ್ಳುವ ತೀರ್ಮಾನವನ್ನು ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುತ್ತಾರೆ ಎನ್ನಲಾಗಿದೆ.
ಆಡಳಿತರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಅಡೆಚಣೆಗಳಿಲ್ಲದೇ ಸಂಪೂರ್ಣವಾಗಿ 5 ವರ್ಷ ಪೂರೈಸುತ್ತದೆ ಎನ್ನುವ ಭರವಸೆ ನೀಡುತ್ತಿದ್ದಾರೆ. ಆದರೆ ಇತ್ತ ಬಿಜೆಪಿಯಲ್ಲಿ ದಿಢೀರ್ ಬೆಳವಣಿಗೆಗಳು ಚಿಗುರುತ್ತಿದ್ದು, ಎಲ್ಲಾ ಶಾಸಕರ ಸಭೆ ಕರೆದಿರುವುದು ಕೂತುಹಲ ಕೆರಳಿಸಿದೆ.
ಕೈ ಶಾಸಕರ ಅಸಮಾಧಾನಕ್ಕೆ ಕಾರಣ ಏನು?
ನಾವು ಹೇಳಿದ ಯಾವುದೇ ಕೆಲಸಗಳು ಈ ಸಮ್ಮಿಶ್ರ ಸರ್ಕಾರದಲ್ಲಿ ಆಗುತ್ತಿಲ್ಲ ಎನ್ನುವುದು ಕೈ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯನವರನ್ನು ಕುಮಾರಸ್ವಾಮಿ ಕಡೆಗಣಿಸುತ್ತಿದ್ದು ಹೀಗಾಗಿ ಸಿದ್ದು ಬೆಂಬಲಿಗರಿಗೂ ಸರ್ಕಾರದಲ್ಲಿ ಪ್ರಾಶಸ್ತ್ಯ ಸಿಗುತ್ತಿಲ್ಲ. ಜೆಡಿಎಸ್ ಶಾಸಕರು ಅದರಲ್ಲೂ ರೇವಣ್ಣ ಸೂಪರ್ ಸಿಎಂ ಆಗಿದ್ದು ಸರ್ಕಾರದ ಎಲ್ಲಾ ಇಲಾಖೆಯಲ್ಲಿ ಕೈ ಆಡಿಸುತ್ತಿದ್ದಾರೆ ಎನ್ನುವುದು ಕೈ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಡಿಸಿಎಂ ಪರಮೇಶ್ವರ್ ಮತ್ತು ಸಿಎಂ ಕುಮಾರಸ್ವಾಮಿ ಅವರ ಸಂಬಂಧ ಚೆನ್ನಾಗಿತ್ತು. ಆದರೆ ಕುಮಾರಸ್ವಾಮಿ ಐಪಿಎಸ್ ಅಧಿಕಾರಿಗಳ ವಿಚಾರದಲ್ಲಿ ನನಗೆ ತಿಳಿಯದಂತೆ ಮಾಡಿದ್ದಾರೆ. ನನ್ನ ಬಳಿ ಗೃಹ ಇಲಾಖೆ ಇದ್ದರೂ ವರ್ಗಾವಣೆ ವಿಚಾರದ ಬಗ್ಗೆ ಚರ್ಚಿಸಬಹುದಾಗಿತ್ತು. ಆದರೆ ಚರ್ಚೆ ನಡೆಸದೇ ಆದೇಶ ಪ್ರಕಟಿಸಿದ್ದಕ್ಕೆ ಪರಮೇಶ್ವರ್ ಆಪ್ತರ ಜೊತೆ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv