ನವದೆಹಲಿ: ಅಮೆರಿಕ (USA) 50% ಸುಂಕ ಸಮರ ಆರಂಭಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಹತ್ತಿ (Cotton) ಆಮದು ಸುಂಕ ವಿನಾಯಿತಿ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.
ವಿಶ್ವದ ಎರಡನೇ ಅತಿದೊಡ್ಡ ಹತ್ತಿ ಉತ್ಪಾದಕ ರಾಷ್ಟ್ರವಾಗಿರುವ ಭಾರತವು ಸೆಪ್ಟೆಂಬರ್ ಅಂತ್ಯದವರೆಗೆ ಹತ್ತಿ ಆಮದಿನ ಮೇಲೆ 11% ಸುಂಕದಿಂದ ವಿನಾಯಿತಿ ನೀಡುವುದಾಗಿ ಘೋಷಿಸಿತ್ತು. ಈಗ ವಿನಾಯಿತಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ.
ರಫ್ತುದಾರರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಸಂಬಂಧ ಕೇಂದ್ರ ಸರ್ಕಾರವು ಸೆ.30 ರಿಂದ ಡಿ.31 ರವರಗೆ ಹತ್ತಿಯ ಮೇಲಿನ ಆಮದು ಸುಂಕ ವಿನಾಯಿತಿಯನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಹೇಳಿದೆ.
ವ್ಯಾಪಾರ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಟ್ರಂಪ್ ಮೊದಲು 25% ತೆರಿಗೆ ವಿಧಿಸಿದ್ದರು. ಇದರ ಬೆನ್ನಲ್ಲೇ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ ಟ್ರಂಪ್ 25% ತೆರಿಗೆ ಹಾಕಿದ್ದಾರೆ. ಈ ಪರಿಣಾಮ ಭಾರತದಿಂದ ರಫ್ತಾಗುವ ಕೆಲ ವಸ್ತುಗಳ ಮೇಲೆ 50% ತೆರಿಗೆ ಹಾಕಲಾಗಿದೆ.
ಟ್ರಂಪ್ ಎರಡನೇ ಆದೇಶ ಸೆ.27 ರಿಂದ ಜಾರಿಗೆ ಬಂದಿದ್ದು ಉಡುಪುಗಳು ಮತ್ತು ಆಭರಣಗಳಿಗೆ 50% ತೆರಿಗೆ ವಿಧಿಸಲಾಗಿದೆ. ಇದನ್ನೂ ಓದಿ: ಉಕ್ರೇನ್ ರಷ್ಯಾ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದ ಅಮೆರಿಕ
2024 ರಲ್ಲಿ ಸುಮಾರು 22 ಬಿಲಿಯನ್ ಡಾಲರ್ ಮೌಲ್ಯದ ಉಡುಪುಗಳು ಮತ್ತು ಆಭರಣಗಳು ಅಮೆರಿಕ್ಕೆ ಭಾರತದಿಂದ ರಫ್ತಾಗಿತ್ತು. ಚೀನಾ, ವಿಯೆಟ್ನಾಂ ಮತ್ತು ಬಾಂಗ್ಲಾದೇಶದ ನಂತರ ಭಾರತವು ಅಮೆರಿಕದ ಉಡುಪು ಮಾರುಕಟ್ಟೆಯಲ್ಲಿ 5.8% ಪಾಲನ್ನು ಹೊಂದಿದೆ.
ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ, ಬ್ರೆಜಿಲ್, ಅಮೆರಿಕ ಮತ್ತು ಆಫ್ರಿಕಾದಿಂದ ಹತ್ತಿಯನ್ನು ಭಾರತ ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ. ವರ್ಷಾಂತ್ಯದವರೆಗೆ ಸುಂಕ ವಿನಾಯಿತಿ ನೀಡುವುದರಿಂದ ಭಾರತೀಯ ಜವಳಿ ಕಂಪನಿಗಳು ಅಗ್ಗದ ಬೆಲೆಯಲ್ಲಿ ಹತ್ತಿಯನ್ನು ಆಮದು ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ. ಇದು ಅಮೆರಿಕದ ಬೇಡಿಕೆ ಕುಸಿತದಿಂದ ಆಗಿರುವ ಒತ್ತಡವನ್ನು ಕಡಿಮೆ ಮಾಡಲಿದೆ.
ಆಮದು ಮಾಡಿಕೊಂಡ ಹತ್ತಿಯ ವೆಚ್ಚವು ಸ್ಥಳೀಯ ಸರಬರಾಜುಗಳಿಗಿಂತ ಸುಮಾರು 5% ರಿಂದ 7% ರಷ್ಟು ಕಡಿಮೆ ಇರಲಿದೆ ಮತ್ತು ಮತ್ತು ಗುಣಮಟ್ಟವೂ ಉತ್ತಮವಾಗಿದೆ ಎಂದು ಮುಂಬೈ ಮೂಲದ ವ್ಯಾಪಾರಿಯೊಬ್ಬರು ಹೇಳಿದರು.
ಹೆಚ್ಚಿನ ಆಮದು ಡಿಸೆಂಬರ್ ತ್ರೈಮಾಸಿಕದ ಆಸುಪಾಸಿನಲ್ಲಿ ಸ್ಥಳೀಯ ಬೆಳೆ ಮಾರುಕಟ್ಟೆಗೆ ಬರುವ ಹೊತ್ತಿಗೆ ಬರುತ್ತದೆ. ಇದು ಸ್ಥಳೀಯ ಬೆಲೆಗಳನ್ನು ಕಡಿಮೆ ಮಾಡುವ ಸಾಧ್ಯತೆಯಿದೆ.