ವಾಷಿಂಗ್ಟನ್: 14 ದೇಶಗಳ ಜೊತೆ ತೆರಿಗೆ ಸಮರ (Tariff War) ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಸುಂಕ ವಿಧಿಸಿದ ಬೆನ್ನಲ್ಲೇ ತಾಮ್ರದ ಮೇಲೆ 50% ಸುಂಕ (Tariff on Copper) ಘೋಷಿಸಿದ್ದಾರೆ. ಜೊತೆಗೆ ಅಮೆರಿಕಕ್ಕೆ ಆಮದಾಗುವ ಫಾರ್ಮಾ ಔಷಧಗಳ ಮೇಲೆ 200% ಸುಂಕ (Tariff) ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಕ್ಯಾಬಿನೆಟ್ ಸಭೆಗೆ ಟ್ರಂಪ್ ಈ ವಿಷಯ ತಿಳಿಸಿದ್ದಾರೆ. ನಾವು ತಾಮ್ರದ ಮೇಲೆ 50% ಸುಂಕ ವಿಧಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಅಲ್ಲದೇ 1 ವರ್ಷದ ನಂತರ ಅಮೆರಿಕ ಆಮದು ಮಾಡಿಕೊಳ್ಳುವ ಔಷಧಗಳ ಮೇಲಿನ ಸುಂಕ 200% ರಷ್ಟು ಹೆಚ್ಚಾಗಬಹುದು. ಸೆಮಿಕಂಡಕ್ಟರ್ ಚಿಪ್‌ಗಳಂತಹ ನಿರ್ದಿಷ್ಟ ಉತ್ಪನ್ನಗಳ ಮೇಲೂ ಹೆಚ್ಚಿನ ಸುಂಕ ಬರಬಹುದು ಎಂದು ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನೆ ರಫೇಲ್ ಯುದ್ಧ ವಿಮಾನ ಕಳೆದುಕೊಂಡಿಲ್ಲ: ಡಸಾಲ್ಟ್ ಏವಿಯೇಷನ್ ಸ್ಪಷ್ಟನೆ
ಅಮೆರಿಕ ಶೀಘ್ರದಲ್ಲೇ ಫಾರ್ಮಾ ಔಷಧಿಗಳ (Pharma Medicines) ಮೇಲಿನ ಸುಂಕ ಘೋಷಣೆ ಮಾಡಲಿದೆ. ಆದ್ರೆ ತಯಾರಕ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನ ಸ್ಥಳಾಂತರಿಸಿಕೊಳ್ಳಲು ಸಮಯ ಕೇಳಿದ್ದಾರೆ. ಅದಕ್ಕಾಗಿ 1 ವರ್ಷ, ಹೆಚ್ಚೆಂದರೆ ಒಂದೂವರೆ ವರ್ಷ ಸಮಯಾವಕಾಶ ನೀಡಲಿದ್ದೇವೆ. ಅದರ ಬಳಿಕ ಅವರೂ ಸುಂಕಕ್ಕೆ ಒಳಗಾಗುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ನರ್ಸ್‌ಗೆ ಜು.16ಕ್ಕೆ ನೇಣು
ಹೊಸ ಸುಂಕ ನೀತಿಯು ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಏಕೆಂದ್ರೆ ಅಮೆರಿಕವು ಭಾರತದ ಔಷಧಗಳಿಗೆ ಅತಿ ದೊಡ್ಡ ವಿದೇಶಿ ಮಾರುಕಟ್ಟೆಯಾಗಿದೆ. ಅಲ್ಲದೇ ತಾಮ್ರ ಮತ್ತು ತಾಮ್ರ ಉತ್ಪನ್ನಗಳ ಪ್ರಮುಖ ರಫ್ತು ಮಾಡುವ ರಾಷ್ಟ್ರವಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಟ್ರಕ್, ಕಾರು ನಡುವೆ ಅಪಘಾತ – ಭಾರತ ಮೂಲದ ನಾಲ್ವರು ಸಜೀವ ದಹನ
ಭಾರತದ ಮೇಲೆ ಏನು ಪರಿಣಾಮ?
2024-2025ರ ವರ್ಷದಲ್ಲಿ ಭಾರತವು ವಿಶ್ವದಾದ್ಯಂತ ಸುಮಾರು 2 ಶತಕೋಟಿ ಡಾಲರ್ ಮೌಲ್ಯದಷ್ಟು ತಾಮ್ರ ಮತ್ತು ತಾಮ್ರದ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಈ ಪೈಕಿ ಅಮೆರಿಕದ ಮಾರುಕಟ್ಟೆಗಳಿಗೆ 360 ದಶಲಕ್ಷ ಡಾಲರ್ ಮೌಲ್ಯದಷ್ಟು ಅಥವಾ ಶೇ.17ರಷ್ಷು ರಫ್ತು ಮಾಡಿತ್ತು. ಅದೇ ರೀತಿ ಸೌದಿ ಅರೇಬಿಯಾಗೆ ಶೇ.26, ಚೀನಾಗೆ ಶೇ.18ರಷ್ಟು ರಫ್ತು ಮಾಡಿತ್ತು. ಇದೀಗ ಅಮೆರಿಕ 50% ಸುಂಕ ನೀತಿಯು ಈ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.