– ಮಾನಸಿಕ ಸಮಸ್ಯೆಗಳನ್ನು ಹೊಂದಿರುವ ಅನರ್ಹ ವ್ಯಕ್ತಿಗಳ ನೇಮಕ
ವಾಷಿಂಗ್ಟನ್: ಒಬಾಮಾ (Barack Obama) ಮತ್ತು ಬೈಡನ್ (Joe Biden) ಆಡಳಿತದ ಅವಧಿಯಲ್ಲಿ ಜಾರಿಗೆ ತರಲಾದ ನೀತಿಗಳು ವಾಯು ಸುರಕ್ಷತಾ ಮಾನದಂಡಗಳಲ್ಲಿ ರಾಜಿ ಮಾಡಿಕೊಂಡಿವೆ ಎಂದು ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕನ್ ಏರ್ಲೈನ್ಸ್ ಪ್ಯಾಸೆಂಜರ್ ಜೆಟ್ ಮತ್ತು ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಡುವಿನ ಡಿಕ್ಕಿಯ (Chopper-Plane Crash) ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರ ಹೇಳಿಕೆಯಿಂದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ನೇಮಕಾತಿ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ.
ಆ ಅವಧಿಯ ನೀತಿಗಳು ಸುರಕ್ಷತೆಗಿಂತ ನೀತಿಗೆ ಹೆಚ್ಚು ಆದ್ಯತೆ ನೀಡಿವೆ. ನಾನು ಸುರಕ್ಷತೆಗೆ ಮೊದಲ ಸ್ಥಾನ ನೀಡುತ್ತೇನೆ. ಈ ಮೂಲಕ ಸಮರ್ಥ ಜನರನ್ನು ಬಯಸುತ್ತೇನೆ. ಮಾಜಿ ಸಾರಿಗೆ ಕಾರ್ಯದರ್ಶಿ ಪೀಟ್ ಬುಟ್ಟಿಗೀಗ್ ಅವರನ್ನು ಗುರಿಯಾಗಿಸಿ, ಅವರು ವಾಯು ಸಂಚಾರ ನಿಯಂತ್ರಣ ಹುದ್ದೆಗಳಿಗೆ ಅಂಗವೈಕಲ್ಯ ಮತ್ತು ಮಾನಸಿಕ ಸಮಸ್ಯೆಗಳನ್ನು ಹೊಂದಿರುವ ಅನರ್ಹ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಏಜೆನ್ಸಿಯ ನೇಮಕಾತಿ ಅಭ್ಯಾಸಗಳು ಮತ್ತು ಸುರಕ್ಷತಾ ಮಾನದಂಡಗಳು ಮುಂಬರುವ ದಿನಗಳಲ್ಲಿ ತೀವ್ರ ಪರಿಶೀಲನೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಒಬಾಮಾ ಆಡಳಿತದ ಸಮಯದಲ್ಲಿ FAA ಯ ನೇಮಕಾತಿಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಕ್ರಮವು ವಾಯು ಸಂಚಾರ ನಿಯಂತ್ರಕರಲ್ಲಿ ವೈವಿಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು. ಆ ಸಮಯದಲ್ಲಿ ಕೆಲವರು ಈ ವಿಧಾನವನ್ನು ಟೀಕಿಸಿದ್ದರು.
ಅಮೆರಿಕದ ಅರ್ಲಿಂಗ್ಟನ್ ಬಳಿ ಬುಧವಾರ ರಾತ್ರಿ ಲ್ಯಾಂಡಿಂಗ್ ಆಗುವಾಗ ಸೇನಾ ಕಾಪ್ಟರ್‌ಗೆ ವಿಮಾನ ಡಿಕ್ಕಿಯಾಗಿ, ನದಿಗೆ ಬಿದ್ದಿದ್ದವು. ಈ ದುರಂತದಲ್ಲಿ 67 ಮಂದಿ ಸಾವಿಗೀಡಾಗಿದ್ದರು. ಈವರೆಗೂ 30 ಶವಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.