– ತುಂಡು ಚೀಟಿಯಲ್ಲಿ 6+3 ಲೆಕ್ಕಾಚಾರ
ಬೆಂಗಳೂರು: ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಅವರು ಇಂದು ಬಜೆಟ್ ಮಂಡಿಸಿದ್ರೂ, ಸದನದಲ್ಲಿ ಪಾಸ್ ಆಗುವುದು ಡೌಟ್ ಎಂಬ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಸದನದ ಲೆಕ್ಕಾಚಾರ ಸಾಕ್ಷಿಯಾಗಿದೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ವಿರೋಧದ ನಡುವೆಯೇ ಸಿಎಂ ಕುಮಾರಸ್ವಾಮಿ ಅವರು ಇಂದು ಬಜೆಟ್ ಮಂಡನೆ ಮಾಡಿದರು. ಸುಮಾರು 3 ಗಂಟೆ 10 ನಿಮಿಷಗಳ ಕಾಲ ಸಿಎಂ ಬಜೆಟ್ ಓದಿದರು. ಆದರೆ ಈ ವೇಳೆ ಸಚಿವರ ಕೈಗೆ ಬಂದ ಚೀಟಿಯಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆಯಬಹುದಾದ ಸ್ಫೋಟಕ ಬೆಳವಣಿಗೆಗಳ ಸುಳಿವಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಿದ್ದರು. ಆದರೂ ಸಭೆಗೆ ಕೆಲ ಶಾಸಕರು ಗೈರಾಗಿದ್ದರು. ಆದರೆ ಗೈರು ಹಾಜರಿಗೆ ಶಾಸಕರು ಕಾರಣ ನೀಡಿ ನೋಟಿಸ್‍ಗೆ ಉತ್ತರಿಸಿದ್ದಾರೆ ಎಂದು ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದರು.
Advertisement
ಚೀಟಿಯಲ್ಲಿ ಏನಿದೆ?
ಸಮ್ಮಿಶ್ರ ಸರ್ಕಾರ ರಚನೆ ಆದ ದಿನದಿಂದಲೂ ಸರ್ಕಾರ ಉಳಿವಿಗೆ ಸಚಿವ ಡಿಕೆ ಶಿವಕುಮಾರ್ ಅವರು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅಲ್ಲದೇ ರೆಸಾರ್ಟ್ ರಾಜಕೀಯದ ವೇಳೆಯೂ ಶಾಸಕರ ನೇತೃತ್ವ ವಹಿಸಿಕೊಂಡಿದ್ದರು. ಅಲ್ಲದೇ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾದ ಶಾಸಕರ ಮನವೊಲಿಕೆಗೆ ಬೇಕಾದ ಸಿದ್ಧತೆಯನ್ನು ಮಾಡಿದ್ದರು.
Advertisement
ಇಂದು ಡಿಕೆ ಶಿವಕುಮಾರ್ ಅವರ ಕೈಯಲ್ಲಿದ್ದ ಚೀಟಿಯಲ್ಲಿ ಆತೃಪ್ತ ಶಾಸಕರ ಹೆಸರು ಇದ್ದು, ಇದುವರೆಗೂ ಆತೃಪ್ತರ ಪಟ್ಟಿಯಲ್ಲಿ ಕಾಣಸಿಗದ ಹೆಸರುಗಳು ಕೂಡ ಪಟ್ಟಿಯಲ್ಲಿ ಸಿಕ್ಕಿದೆ. ಈಗಾಗಲೇ ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ನಾಗೇಂದ್ರ ಮತ್ತು ಮಹೇಶ್ ಕುಮಟಳ್ಳಿ ಬಂಡಾಯ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಹೊಸದಾಗಿ ಪಟ್ಟಿಯಲ್ಲಿ ಮಾಜಿ ಸಿಎಂ ಧರಂಸಿಂಗ್ ಅವರ ಪುತ್ರ ಅಜಯ್ ಸಿಂಗ್ ಹೆಸರು ಕೂಡ ಇದ್ದು, ಇದು ಸಾಕಷ್ಟು ಕುತೂಹಲ ಮೂಡಿಸಿದೆ.
ಶಾಸಕ ಅಜಯ್ ಸಿಂಗ್ ಅವರೊಂದಿಗೆ ಜೆಡಿಎಸ್ ಪಕ್ಷದ ನಾರಾಯಣಗೌಡರ ಹೆಸರು ಕೂಡ ಇದೆ. ಮಂಡ್ಯ ಕೆಆರ್ ಪೇಟೆ ಶಾಸಕರಾಗಿರುವ ನಾರಾಯಣ ಗೌಡರನ್ನು ಕೂಡ ಕಾಂಗ್ರೆಸ್ ಕೈ ಬಿಟ್ಟ ಶಾಸಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಉಳಿದಂತೆ 3 ಶಾಸಕರ ಹೆಸರು ಡೇಂಜರ್ ಝೋನ್ ಪಟ್ಟಿಯಲ್ಲಿ ನೀಡಲಾಗಿದೆ. ಇದರಲ್ಲಿ ಶಾಸಕ ಬಿಸಿ ಪಾಟೀಲ್, ರೋಷನ್ ಬೇಗ್, ಕಂಪ್ಲಿ ಗಣೇಶ್ ಅವರ ಹೆಸರು ಕೂಡ ಇದೆ.
ಸದ್ಯ ಬಿಜೆಪಿ 104 ಸ್ಥಾನಗಳನ್ನು ಹೊಂದಿದ್ದು, ಇಬ್ಬರು ಪಕ್ಷೇತರರು ಸೇರಿದಂತೆ ಬಂಡಾಯ ಶಾಸಕರ ಸಂಖ್ಯೆಯನ್ನು ಹೆಸರಿನ ಸಮೇತ ನೀಡಲಾಗಿದೆ. ಇದರಲ್ಲಿ 6 ಪಸ್ಲ್ 3 ಎಂದು ಕೂಡ ಲೆಕ್ಕಾ ಮಾಡಲಾಗಿದೆ. ಇಂದಿನ ಕಲಾಪಕ್ಕೆ ಅಜಯ್ ಸಿಂಗ್ ಹಾಗೂ ರೋಷನ್ ಬೇಗ್ ಅವರು ಗೈರಾಗಿದ್ದು, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತರಾ ಎಂಬ ಅನುಮಾನ ಮೂಡಲು ಕಾರಣವಾಗಿದೆ.
ಇಂತಿದೆ ಲೆಕ್ಕಾಚಾರ: ಸದ್ಯ ಬಿಜೆಪಿ 104 ಶಾಸಕರೊಂದಿಗೆ ಇಬ್ಬರು ಪಕ್ಷೇತರ ಬೆಂಬಲ ಹೊಂದಿದ್ದರೆ, ಆತೃಪ್ತ ಶಾಸಕರ ಪಟ್ಟಿಯಲ್ಲಿ 6 ಜನ ಶಾಸಕರ ಹೆಸರಿದೆ. ಇಂದು ಕಂಡು ಬಂದ ಡೇಂಜರ್ ಝೋನ್ ಪಟ್ಟಿಯಲ್ಲಿ 3 ಶಾಸಕರ ಹೆಸರಿದ್ದು, ಒಟ್ಟಾರೆ 115 ಆಗಲಿದೆ. ಹಾಲಿ ಸದನದಲ್ಲಿ 119 ಶಾಸಕರ ಬಲ (ನಾಮ ನಿರ್ದೇಶಿತರು ಸೇರಿ) ಸಮ್ಮಿಶ್ರ ಸರ್ಕಾರಕ್ಕೆ ಇದ್ದು, 9 ಶಾಸಕರು ಕೈ ಕೊಟ್ಟರೆ 110ಕ್ಕೆ ಬೆಂಬಲ ಸಂಖ್ಯೆ ಇಳಿಕೆ ಆಗಲಿದೆ. ಒಂದೊಮ್ಮೆ ಈ ಲೆಕ್ಕಾಚಾರದಂತೆ ನಡೆದರೆ ಸದನದಲ್ಲಿ ಬಜೆಟ್ ಪಾಸ್ ಆಗುವುದು ಕಷ್ಟಸಾಧ್ಯ ಆಗಲಿದೆ.
ಮೇಲಿನ ಲೆಕ್ಕಾಚಾರದಂತೆ ಸಚಿವ ಡಿಕೆ ಶಿವಕುಮಾರ್ ಅವರು ಚಿಂತನೆ ನಡೆಸಿದ್ದು, ಬಜೆಟ್ ಸದನದಲ್ಲಿ ಪಾಸ್ ಆಗಲು ಬೇಕಾದ ಸಂಖ್ಯಾಬಲ ಉಳಿಸಿಕೊಳ್ಳಲು ಚಿಂತನೆ ನಡೆಸಿದಂತೆ ಕಂಡು ಬಂತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv