ChitradurgaDistrictsKarnatakaLatestMain PostTumakuru

ಚಿತ್ರದುರ್ಗ, ತುಮಕೂರಲ್ಲಿ ಭೂಮಿ ಕಂಪಿಸಿದ ಅನುಭವ

– ಕೋಟೆ ನಾಡಲ್ಲಿ ಬಿರುಕು ಬಿಟ್ಟ ದೇವಸ್ಥಾನ

ಚಿತ್ರದುರ್ಗ/ತುಮಕೂರು: ಇಂದು ಬೆಳ್ಳಂಬೆಳಗ್ಗೆ ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮ ಹಾಗೂ ಗೇಟ್‍ನಲ್ಲಿ ಇಂದು ಬೆಳಗ್ಗೆ 6.45ರ ವೇಳೆಗೆ ಭೂಕಂಪನದ ಅನುಭವವಾಗಿದ್ದು, ಜನ ಗಾಬರಿಗೊಳಗಾಗಿದ್ದಾರೆ. ಮಲಗಿದ್ದ ಮಕ್ಕಳನ್ನು ಹೊತ್ತು ಪೋಷಕರು ಹೊರಗೆ ಓಡಿದ್ದು, ಮಕ್ಕಳು ಹಾಗೂ ಮಹಿಳೆಯರು ಚೀರಾಡಿದ್ದಾರೆ.

ಹೊಸದುರ್ಗ ತಾಲೂಕಿನ ಕಂಚೀಪುರ, ಕಿಟ್ಟದಾಳ್, ಚಿಕ್ಕ ಬ್ಯಾಲದಕೆರೆ, ನಾಗತಿಹಳ್ಳಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಕಿ.ಮೀ ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಿದೆ. ಭೂ-ಕಂಪನದಿಂದಾಗಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದ ಕಂಚಿವರದಸ್ವಾಮಿ ದೇವಸ್ಥಾನದ ಮೇಲೆ ಕೆತ್ತಿದ್ದ ಗೊಂಬೆಗಳು ಬಿರುಕು ಬಿಟ್ಟಿವೆ

ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ, ಗಾಣಧಾಳು ಸೇರಿದಂತೆ ಇನ್ನೂ ಕೆಲ ಗ್ರಾಮಗಳಲ್ಲಿ ಮುಂಜಾನೆ 6.30ರ ವೇಳೆ ಭೂಮಿ ಕಂಪಿಸಿದ ಅನುಭವ ಆಗಿದೆ. ಸುಮಾರು 5 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ್ದು, ಇದರಿಂದ ಮನೆಯಲ್ಲಿದ್ದ ಪಾತ್ರೆಗಳು ಬಿದಿವೆ. ಕೆಲವೆಡೆ ಗೋಡೆಗಳು ಬಿರುಕು ಬಿಟ್ಟಿವೆ. ಕಂಪನದಿಂದ ಗಾಬರಿಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸದ್ಯ ರಿಕ್ಟರ್ ಮಾಪನದಲ್ಲಿ 2.9 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದ್ದು, ಗಾಬರಿಗೊಂಡ ಜನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

Back to top button