ಶಿವಮೊಗ್ಗ: ನಿಧಿಯಾಸೆಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ಐವರು 5 ಲಕ್ಷ ರೂ. ನಗದು ನೀಡಿ ಮೋಸ ಹೋಗಿದ್ದು, ಬಳಿಕ ಮಕ್ಕಳ ಕಳ್ಳರು ಅಂತಾ ಗ್ರಾಮಸ್ಥರಿಂದ ಥಳಿಸಿಕೊಂಡಿದ್ದಾರೆ.
ಬೆಂಗಳೂರಿನ ಯಲಹಂಕದ ಅಶೋಕ್, ಮೂರ್ತಿ, ಸತೀಶ್, ಅಜಿತ್ ಹಾಗೂ ಅವಿನಾಶ್ ಮೋಸ ಹೋಗಿ, ಥಳಿಸಿಕೊಂಡವರು. ಶಿವಮೊಗ್ಗ ತಾಲೂಕು ಕಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಐವರನ್ನು ಗ್ರಾಮಸ್ಥರು ದೇವಾಲಯದಲ್ಲಿ ಕೂಡಿ ಹಾಕಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement
ನಡೆದದ್ದು ಏನು?
ಬೆಂಗಳೂರಿನ ಅಶೋಕ್‍ಗೆ ಮಂಜುನಾಥ್ ಎಂಬವನು ಧರ್ಮಸ್ಥಳದಲ್ಲಿ ಒಂದು ವರ್ಷದ ಹಿಂದೆ ಪರಿಚಯವಾಗಿದ್ದ. ಕಳೆದ ತಿಂಗಳು ಅಶೋಕ್‍ಗೆ ಕರೆ ಮಾಡಿ, ನಿಧಿ ಸಿಕ್ಕಿದೆ ಗುಪ್ತವಾಗಿ ಮಾರಾಟ ಮಾಡಬೇಕು ಅಂತ ಹೇಳಿದ್ದ. ಇದನ್ನು ಪರೀಕ್ಷಿಸಲು ಕೆಲವು ದಿನಗಳ ಹಿಂದೆ ಬಂದಿದ್ದ ಅಶೋಕ್‍ಗೆ ಒಂಬತ್ತು ಗ್ರಾಂನ ಚಿನ್ನದ ನಾಣ್ಯವನ್ನು ಸ್ಯಾಂಪಲ್‍ಗಾಗಿ ಕೊಟ್ಟಿದ್ದಾನೆ.
Advertisement
Advertisement
ಚಿನ್ನದ ನಾಣ್ಯವೆಂದು ಖಚಿತಪಡೆಸಿಕೊಂಡ ಅಶೋಕ್ ನಿಧಿಯನ್ನು ಖರೀದಿಸಲು ಮುಂದಾಗಿದ್ದ. ನಾಣ್ಯಗಳನ್ನು ನೀಡಲು ಮಂಜುನಾಥ್ 5 ಲಕ್ಷ ರೂ. ಬೇಡಿಕೆ ಮಾಡಿದ್ದ. ಹೀಗಾಗಿ ಅವನು ತಿಳಿಸಿದ್ದ ಕಲ್ಲಾಪುರ ಗ್ರಾಮದ ಬಳಿ ಜಾಗಕ್ಕೆ ಭಾನುವಾರ ಬೆಳಗ್ಗೆ ಅಶೋಕ್ ಹಣ ತೆಗೆದುಕೊಂಡು ಸ್ನೇಹಿತರೊಂದಿಗೆ ಬಂದಿದ್ದ.
Advertisement
ಪೂಜೆ ಮಾಡಿದ್ದ ನಿಧಿಯ ಗಂಟು ಹಿಡಿದುಕೊಂಡು ಬಂದಿದ್ದ ಮಂಜುನಾಥ್ ಅದನ್ನು ನೀಡಿ, ಹಣ ಪಡೆದಿದ್ದಾನೆ. ಗಂಟನ್ನು ದೇವರ ಮುಂದೆ ಇಟ್ಟು ತೆರೆಯಬೇಕು ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ. ಮಂಜುನಾಥ್ ಅಲ್ಲಿಂದ ಹೋಗುತ್ತಿದ್ದಂತೆ, ಅಶೋಕ್ ಹಾಗೂ ಆತನ ಸ್ನೇಹಿರು ಗಂಟು ಬಿಚ್ಚಿ ನೋಡಿದ್ದು, ನಾಣ್ಯಗಳು ನಕಲಿ ಎಂದು ಖಚಿತಪಡಿಸಿಕೊಂಡಿದ್ದಾರೆ.
ಮಂಜುನಾಥ್‍ನನ್ನು ಹುಡುಕುತ್ತ ಎಲ್ಲರೂ ಕಲ್ಲಾಪುರ ಗ್ರಾಮಕ್ಕೆ ಬಂದಿದ್ದಾರೆ. ಅವರನ್ನು ಕಂಡ ಗ್ರಾಮಸ್ಥನೊಬ್ಬ ಓಡತೊಡಗಿದ್ದಾನೆ. ಅವನ ಮೇಲೆ ಶಂಕೆ ವ್ಯಕ್ತಪಡಿಸಿದ ಅಶೋಕ್ ಆತನ್ನು ಓಡಿಸಿಕೊಂಡು ಹೋಗಿದ್ದಾರೆ. ಅಷ್ಟರಲ್ಲಿಯೇ ಗ್ರಾಮಸ್ಥರು ಸೇರಿ, ಐವರನ್ನೂ ಹಿಡಿದು ಮಕ್ಕಳ ಕಳ್ಳರೆಂದು ಥಳಿಸಿದ್ದಾರೆ. ಬಳಿಕ ಅವರನ್ನು ದೇವಾಲಯದಲ್ಲಿ ಕೂಡಿ ಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮಕ್ಕೆ ಬಂದ ಪೊಲೀಸರು, ಐವರನ್ನು ವಶಕ್ಕೆ ಪಡೆದು, ವಿಚಾರಿಸಿದ್ದಾರೆ. ಆಗ ತಾವು ನಿಧಿಗಾಗಿ ಬಂದಿದ್ದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv