ಮಾಲ್ಡೀವ್ಸ್‌ ನಾಚಿಸುವ ಸಾಗರ ತೀರಗಳು ನಮ್ಮ ಕರಾವಳಿಯಲ್ಲೇ ಇವೆ ಕಣ್ತುಂಬಿಕೊಳ್ಳಿ..!

Public TV
4 Min Read
PADUKERE BEACH 01 0 00 00 00

– ದೀಪಕ್‌ ಜೈನ್‌
ಉಡುಪಿ: ರಜೆ ಬಂದ್ರೆ ವಿದೇಶಕ್ಕೆ ಹಾರುವವರು ಇಲ್ನೋಡಿ. ನಿಮ್‌ ಕಾಸೂ ಉಳಿಯುತ್ತೆ, ಸಮಯವೂ ವ್ಯರ್ಥ ಆಗಲ್ಲ. ಮಾಲ್ಡೀವ್ಸನ್ನು (Maldives) ನಾಚಿಸುವ ಸಾಗರ ತೀರಗಳು ನಮ್ಮಲ್ಲೇ ಇವೆ ಕಣ್ತುಂಬಿಕೊಳ್ಳಿ. ಕರ್ನಾಟಕ ಕರಾವಳಿಯ ಉಡುಪಿಗೆ (Udupi) ಪ್ರವಾಸೋದ್ಯಮ ಜಿಲ್ಲೆ ಎಂದೇ ಖ್ಯಾತಿ. 100 ಕಿಲೋಮೀಟರ್ ಹೆಚ್ಚು ಸಾಗರ ತೀರಕ್ಕೆ ಅಂಟಿಕೊಂಡಿರುವ ಉಡುಪಿಯಲ್ಲಿ ಪ್ರವಾಸಿಗರು ಓಡಾಡೋ ಹತ್ತಾರು ಸುಂದರ ಸಾಗರ ತಾಣಗಳಿವೆ.

ಪಡುಕೆರೆ ಬೀಚ್
ಉಡುಪಿಯ ಮಲ್ಪೆ ಬೀಚ್ ಸಮೀಪದಲ್ಲಿರುವ ಪಡುಕೆರೆ ಬೀಚ್ ಸುಂದರ ಮೌನ ಮತ್ತು ತಣ್ಣನೆಯ ಅನುಭವ ನೀಡುವ ಕಡಲ ತಡಿ. ಮಲ್ಪೆಯ ನಂತರ ಬಹಳ ಸೇಫ್ ಬೀಚ್ ಎಂಬ ಖ್ಯಾತಿ ಪಡುಕೆರೆಗೆ ಸಲ್ಲುತ್ತದೆ. ಇದನ್ನೂ ಓದಿ: ಕಲ್ಲುಬಂಡೆಗಳ ನಡುವಿನಿಂದ ಧುಮ್ಮಿಕ್ಕಿ ಹರಿಯುತ್ತಿದೆ ಹನುಮನಗುಂಡಿ ಫಾಲ್ಸ್

PADUKERE BEACH 02 0 00 00 00

ಮೂರು ದ್ವೀಪಗಳು ಪಡುಕೆರೆಗೆ ಸೇಫ್ ಗಾರ್ಡ್
ಮಲ್ಪೆ ಮತ್ತು ಕಾಪು ಬೀಚಿನ ನಡುವೆ ಪಡುಕೆರೆ ಬೀಚ್ (Padukere Beach) ಆವರಿಸಿಕೊಂಡಿದೆ. ಸಮುದ್ರ ನಡುವೆ ಒಂದು ಮೀನುಗಾರಿಕಾ ರಸ್ತೆ, ಪಕ್ಕದಲ್ಲಿ ಹತ್ತಾರು ಮೀನುಗಾರರ ಮನೆಗಳು, ಸಮುದ್ರ ತೀರದಲ್ಲಿ ಒಂದು ಪುಟ್ಟ ಹಳ್ಳಿಯೇ ನಿರ್ಮಾಣವಾಗಿದೆ. ಮನೆ ಅಂಗಳದಿಂದ ಹೊರಟು ರಸ್ತೆ ದಾಟಿದರೆ ಸಮುದ್ರ ತೀರವೇ. ಒಂದರ್ಥದಲ್ಲಿ ಮೀನುಗಾರರಿಗೆ ಸಮುದ್ರವೇ ಅಂಗಳವಿದ್ದಂತೆ. ಅಲ್ಲೇ ಅವರ ಕಸುಬು ಅದೇ ಬದುಕು. ಪಡುಕೆರೆ ಮತ್ತು ಮಲ್ಪೆ ಬೀಚ್ ನಡುವೆ ಮೂರು ದೊಡ್ಡ ದೊಡ್ಡ ಬಂಡೆಗಳು ಇರುವುದರಿಂದ ಅಪಾಯಕಾರಿ ಅಲೆಗಳು ದಡಕ್ಕೆ ಅಪ್ಪಳಿಸುವುದಿಲ್ಲ.

ಮರೀನಕ್ಕೆ ಹೇಳಿ ಮಾಡಿಸಿದ ಜಾಗ
ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ರೂಸ್‌ಗಳು ಅರಬ್ಬಿ ಸಮುದ್ರದ ಮೇಲೆ ಓಡಾಡುವಾಗ ಅಲ್ಲೊಂದು ಅವರಿಗೆ ನಿಲ್ದಾಣ ಬೇಕಾಗುತ್ತದೆ. ಮರೀನಾ ರಚನೆ ಮಾಡಲು ಪಡುಕೆರೆ ಬೀಚ್ ವ್ಯಾಪ್ತಿ ಬಹಳ ಸೂಕ್ತವಾದದ್ದು ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ. ಇದನ್ನೂ ಓದಿ: ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್‌ ಟ್ರೆಂಡ್‌

PADUKERE BEACH 03 0 00 00 00

ಮಲ್ಪೆ ಬೀಚ್ ಆಸುಪಾಸಿನಲ್ಲಿ ಮೈ ಮರೆತು ಈಜಾಡುವಂತೆ, ಪಡುಕೆರೆಯಲ್ಲಿ ಮೈಮರೆತು ವಿಹರಿಸುವಂತಿಲ್ಲ. ಸಮುದ್ರದಾಳದಲ್ಲಿ ಏರು ತಗ್ಗುಗಳು, ಹೊಂಡಗಳು ಇರುವುದರಿಂದ ಬಹಳ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಕೆಜಿಎಫ್‌-2 ಸಿನೆಮಾದ ಕೆಲವು ದೃಶ್ಯ ಕೂಡಾ ಇದೇ ಪಡುಕೆರೆ ಬೀಚ್‌ನಲ್ಲಿ ಚಿತ್ರೀಕರಣಗೊಂಡಿವೆ.

ನದಿ, ಸಮುದ್ರ ಸಂಗಮ..!
ಪಡುಕೆರೆ ಬೀಚ್‌ನಲ್ಲಿ ಪಾಪನಾಶಿನಿ ನದಿ ಸಂಗಮವಾಗುತ್ತದೆ. ಸಮುದ್ರ ನಡುವೆ ರಸ್ತೆ ನೂರಾರು ಮೀನುಗಾರರ ಮನೆಗಳು ಪಕ್ಕದಲ್ಲಿ ಹರಿಯುವ ಪಾಪನಾಶಿನಿ ಹೊಳೆ. ಕ್ಯಾಲೆಂಡರ್‌ಗಳಲ್ಲಿ, ಪೋಸ್ಟರ್‌ಗಳಲ್ಲಿ ಒಂದು ಕಲ್ಪಿತ ಚಿತ್ರದಂತೆ ಪಡುಕೆರೆ ರೂಪುಗೊಂಡಿದೆ. ಪ್ರತಿ ಮಳೆಗಾಲ ಬಂದಾಗ ಎರಡು ಗ್ರಾಮದ ಕುಟುಂಬಗಳು ಆತಂಕದಿಂದ ಇದ್ದರೂ ಆತಂಕ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಪಡುಕೆರೆ ಎಂಬ ಹುಟ್ಟೂರನ್ನು ತೊರೆಯುವ ಮನಸ್ಸನ್ನು ಯಾವ ಕುಟುಂಬಗಳು ಮಾಡುತ್ತಿಲ್ಲ. ಇದನ್ನೂ ಓದಿ: ಅನಾಮಿಕ ಸುಂದರಿ ದಿಡುಪೆ ಫಾಲ್ಸ್

PADUKERE BEACH 04 0 00 00 00

ಸೈಕ್ಲಿಂಗ್ ಯೋಗ್ಯ ಮಟ್ಟು – ಪಡುಕೆರೆ ದಾರಿ
ಸಮುದ್ರಕ್ಕೆ ತಾಗಿಯೇ ಮೀನುಗಾರಿಕಾ ರಸ್ತೆ ಪಕ್ಕದ ಕಾಪು ತಾಲೂಕನ್ನು ಸಂಪರ್ಕ ಮಾಡುತ್ತದೆ. ಅತಿ ಹೆಚ್ಚು ವಾಹನಗಳು ಓಡಾಡದ ಈ ರಸ್ತೆಯನ್ನು ಸೈಕ್ಲಿಂಗ್ ಪಟುಗಳು ಬಹಳಷ್ಟು ಇಷ್ಟಪಡುತ್ತಾರೆ. ವಿದೇಶಿಯರಿಗೂ ಕೂಡ ಈ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವುದೆಂದರೆ ಅಚ್ಚುಮೆಚ್ಚು.

ನಕ್ಷತ್ರಗಳನ್ನು ನೋಡುತ್ತಾ..!
ಬಾಹ್ಯಾಕಾಶ ವೀಕ್ಷಣೆ ಮಾಡಲು ಉಡುಪಿಯಲ್ಲಿ ಸೂಕ್ತ ಬೀಚ್ ಒಂದಿದ್ದರೆ ಅದು ಪಡುಕೆರೆ. ಯಾಕೆಂದರೆ ಇದು ನಗರದಿಂದ ಸಂಪೂರ್ಣವಾಗಿ ದೂರವಿರುವ ಬೀಚ್. ಜನವಸತಿ ಪ್ರದೇಶ ಮಾತ್ರ ಇರುವ ಕಡಲತಡಿ. ಇಲ್ಲಿ ಯಾವುದೇ ವ್ಯಾಪಾರ ವಹಿವಾಟುಗಳು ವಿಸ್ತರಣೆಗೊಂಡಿಲ್ಲ. ಕೃತಕ ಬೆಳಕು ಇಲ್ಲಿಗೆ ಸೋಕುವುದೇ ಇಲ್ಲ. ಬರೀ ಕತ್ತಲು ಆವರಿಸಿರುವ ಕಾರಣ ಆಕಾಶ ಶುಭ್ರವಾಗಿ ಗೋಚರವಾಗುತ್ತದೆ. ಇದನ್ನೂ ಓದಿ: ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ ನೀವೂ ಭೇಟಿ ಕೊಡಿ

padukere beach

ಬಯೋ ಲುಮಿನಿಸೆನ್ಸ್
ಸಮುದ್ರದ ನೀರಿನಲ್ಲಿ ಹೊಳೆಯುವ ಸೂಕ್ಷ್ಮಜೀವಿಗಳು ಹೆಚ್ಚಾಗಿ ಕಂಡುಬಂದದ್ದು, ಇದೇ ಜಾಗದಲ್ಲಿ. ಬಯೋ ಲುಮಿನಿಸೆನ್ಸ್ ನೋಡಲೆಂದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪ್ರವಾಸಿಗರು ಇಲ್ಲಿಗೆ ಬಂದಿದ್ದರು. ಅಧ್ಯಯನ ಮಾಡಿದ್ದು ಕೂಡ ಇದೇ ಪಡುಕೆರೆ ಬೀಚಿನಲ್ಲಿ ಎಂಬುದು ಉಲ್ಲೇಖನೀಯ.

ಬಹಳ ನುಣುಪಾದ ಮರಳು, ಬೇರೆ ಬೇರೆ ಆಕಾರದ ಚಿಪ್ಪುಗಳು, ನಾಡ ದೋಣಿ ಮೀನುಗಾರಿಕೆ, ಕೈರಂಪಣಿ ಬಲೆ ಬಿಸಿ ಮೀನುಗಾರಿಕೆ ಮಾಡುವ ಕಡಲ ಮಕ್ಕಳಿಗೆ ಪಡುಕೆರೆ ಎಂದರೆ ಅಂಗಳದಲ್ಲೇ ಕಸುಬು ಮಾಡಿದಂತೆ. ಅಷ್ಟೊಂದು ಸೇಫ್ ಈ ಬೀಚ್. ಉಡುಪಿಯಿಂದ 10 ಕಿಲೋಮೀಟರ್ ದೂರ ಇರುವ ಈ ತಾಣದಲ್ಲಿ ಇತ್ತೀಚಿನ ಮೂರ್ನಾಲ್ಕು ವರ್ಷಗಳಲ್ಲಿ ಬೆರಳೆಣಿಕೆ ಹೋಂ ಸ್ಟೇಗಳು ಆರಂಭವಾಗಿದೆ. ಉಡುಪಿಯಲ್ಲಿ ಬಿಡಾರ ಹೂಡಿ ಸಮುದ್ರ ನೋಡಲು ಪಡುಕೆರೆಗೆ ತೆರಳುವುದೇ ಉತ್ತಮ. ಇದನ್ನೂ ಓದಿ: ಲಕ್ಷದ್ವೀಪದ ರೋಚಕ ಇತಿಹಾಸ, ಇಲ್ಲಿರುವ ಪ್ರವಾಸಿ ತಾಣಗಳು ಯಾವುವು..?

ಎಲ್ಲಿದೆ?
ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾಪು ತಾಲೂಕನ್ನು ಹಂಚಿಕೊಂಡು ಪಡುಕೆರೆ ಬೀಚ್ ಆವರಿಸಿಕೊಂಡಿದೆ. ಇದನ್ನೂ ಓದಿ: ಲಕ್ಷದ್ವೀಪದ ಬೀಚ್‌ನಲ್ಲಿ ಮೋದಿ ಕೂಲ್‌; ಇಲ್ಲಿದೆ ನೋಡಿ PHOTOS

ಉಡುಪಿಯಿಂದ ಎಷ್ಟು ದೂರ?
ಉಡುಪಿಯಿಂದ ಮಲ್ಪೆ ರಸ್ತೆಯಲ್ಲಿ 10 ಕಿಲೋಮೀಟರ್ ಸಾಗಿದರೆ ಪಡುಕೆರೆ ಬೀಚ್ ಸಿಗುತ್ತದೆ. ಮಲ್ಪೆ ಬಸ್ ನಿಲ್ದಾಣದಿಂದ ಎಡಕ್ಕೆ ತಿರುವು. ಪಾಪನಾಶಿನಿ ಒಳಗೆ ಕಟ್ಟಲಾದ ಬ್ರಿಜ್ ದಾಟಿ ಮುಂದೆ ಹೋದರೆ ಕಣ್ಣ ಮುಂದೆ ಪ್ರತ್ಯಕ್ಷವಾಗುತ್ತದೆ ಪಡುಕೆರೆ ಕಡಲತಡಿ. ಉಡುಪಿಯಿಂದ ಬಸ್, ಆಟೋ ಅಥವಾ ಬಾಡಿಗೆ ಬೈಕುಗಳನ್ನ ಪಡೆದು ಪಡುಕೆರೆಗೆ ತಲುಪಬಹುದು. ಬ್ರೇಕ್ ಫಾಸ್ಟ್, ಊಟ, ಸ್ನ್ಯಾಕ್ಸ್‌ಗೆ ಮಲ್ಪೆ ಜಂಕ್ಷನನ್ನು ನೆಚ್ಚಿಕೊಳ್ಳಬಹುದು. ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಮೋದಿ ಸ್ನಾರ್ಕ್ಲಿಂಗ್ – ಫೋಟೋಗಳು ಸಿಕ್ಕಾಪಟ್ಟೆ ವೈರಲ್‌!

Share This Article