ಈ ಹಿಂದೆ ಜಿಗರ್ ಥಂಡಾ, ಹೃದಯದಲಿ ಇದೇನಿದು ಮತ್ತು ಈಗಷ್ಟೇ ಬಿಡುಗಡೆಗೆ ತಯಾರಾಗುತ್ತಿರುವ ಅಖಾಡ ಎಂಬ ರಗಡ್ ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕವೇ ಕನ್ನಡ ಚಿತ್ರ ರಂಗದಲ್ಲಿ ಸಂಚಲನ ಉಂಟು ಮಾಡಿದ್ದವರು ಶಿವಗಣೇಶ್. ಈ ಕಾರಣಕ್ಕಾಗಿಯೇ ತ್ರಾಟಕ ಸಿನಿಮಾದ ಕುರಿತು ಕ್ಯೂರಿಯಾಸಿಟಿ ಹೆಚ್ಚಾಗಿತ್ತು.
ಅದೇನೋ ವಿಕ್ಷಿಪ್ತ ನಿಗೂಢವನ್ನು ತನ್ನೊಳಗೆ ಬಚ್ಚಿಟ್ಟುಕೊಂಡಂತಿರೋ ತ್ರಾಟಕ ಅಂದ್ರೇನು ಅಂತೊಂದು ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಅಂದಹಾಗೆ ಈ ಹೆಸರಿನ ಅರ್ಥಕ್ಕೂ ಇಡೀ ಚಿತ್ರದ ಕಥೆಗೂ ಕನೆಕ್ಷನ್ನುಗಳಿವೆ. ತ್ರಾಟಕ ಅಂದರೆ ಮೇಣದ ಬತ್ತಿಯ ಬೆಳಕನ್ನು ದಿಟ್ಟಿಸಿ ನೋಡುತ್ತಾ ಯೋಗ ವಿದ್ಯೆಯಲ್ಲಿ ಏಕಾಗ್ರತೆ ಸಾಧಿಸೋ ಒಂದು ವಿಧಾನ ಅನ್ನೋದು ಬಿಡುಗಡೆಯಾಗಿರುವ ಸಿನಿಮಾದ ಮೂಲಕ ಜಾಹೀರಾಗಿದೆ.
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ರಮ್ಯ ಚೈತ್ರ ಕಾಲ, ಅಖಾಡ ಮತ್ತು ತಾರೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ರಾಹುಲ್ ಐನಾಪುರ ಈ ಚಿತ್ರವನ್ನು ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿದ್ದಾರೆ. ಅವರು ಈ ಚಿತ್ರದಲ್ಲಿ ಎಂಥಾದ್ದೇ ಅಪರಾಧ ಪ್ರಕರಣವನ್ನಾದರೂ ಬೆನ್ನತ್ತಿ ರಹಸ್ಯ ಜಾಹೀರು ಮಾಡುವ ಸಿಸಿಬಿ ಎಸಿಪಿಯಾಗಿ ನಟಿಸಿದ್ದಾರೆ.
ನಾಯಕ ಇಲ್ಲಿ ತನ್ನ ವೃತ್ತಿಯ ಒತ್ತಡಗಳನ್ನು ಮೀರಿಕೊಂಡು ಅಪರಾಧ ಪ್ರಕರಣಗಳನ್ನು ಭೇದಿಸಲು ತ್ರಾಟಕ ವಿದ್ಯೆಯ ಮೊರೆ ಹೋಗುವ ಅಂಶಗಳಿವೆ. ಸರಣಿ ಕೊಲೆಗಳನ್ನು ಬೆನ್ನತ್ತುವ ಕಥೆ ಕ್ಷಣಕ್ಷಣಕ್ಕೂ ರೋಚಕ ತಿರುವುಗಳನ್ನು ಪಡೆಯುತ್ತಾ ನೋಡುಗರನ್ನು ಥ್ರಿಲ್ ಗೆ ಒಳಪಡಿಸುತ್ತದೆ. ವಿನೋದ್ ಭಾರತಿ ಛಾಯಾಗ್ರಹಣ ಕಥೆಗೆ ಪೂರಕವಾಗಿ ಕೆಲಸ ಮಾಡಿದೆ. ಸುರೇಶ್ ಆರ್ಮುಗಂ ಸಂಕಲನವಂತೂ ತೀಕ್ಷ್ಣವಾಗಿದೆ.
ಭವಾನಿ ಪ್ರಕಾಶ್ ಎಂಬ ರಂಭೂಮಿ ನಟಿಯಂತೂ ಪೊಲೀಸ್ ಅಧಿಕಾರಿಯನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ನಂದಗೋಪಾಲ್ ಎನ್ನುವ ಯುವ ಪ್ರತಿಭೆ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ದಕ್ಕಿದ ಸಮರ್ಥ ಹಾಸ್ಯ ಕಲಾವಿದ ಎನಿಸಿಕೊಳ್ಳುತ್ತಾರೆ. ಒಟ್ಟಾರೆಯಾಗಿ ತ್ರಾಟಕವನ್ನು ಜನ ಮಿಸ್ ಮಾಡದೇ ನೋಡಿದರೆ ಭರ್ಜರಿ ಥ್ರಿಲ್ಲರ್ ಸಿನಿಮಾವನ್ನು ನೋಡಿದ ಅನುಭೂತಿಗೊಳಗಾಗೋದು ಗ್ಯಾರೆಂಟಿ.
ರೇಟಿಂಗ್ – 3.5/5
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv